ಮೆಸ್ಕಾಂ ಅವ್ಯವಸ್ಥೆ: ರಾಷ್ಟ್ರೀಯ ಹೆದ್ದಾರಿ ಆಸುಪಾಸಿನ ಗ್ರಾಮಸ್ಥರು ಕಂಗಾಲು
Monday, January 9, 2023
ಬೆಳುವಾಯಿ ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಆಸುಪಾಸಿನ ಗ್ರಾಮಗಳಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಆಸುಪಾಸಿನ ಗ್ರಾಮಗಳ ಗ್ರಾಮಸ್ಥರು ಪರದಾಡುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಲ್ಲಲ್ಲಿ ನಡೆಯುತ್ತಿದ್ದು ವಿದ್ಯುತ್ ಕಂಬಗಳ ಸ್ಥಳಾಂತರ, ಪೈಪ್‌ಲೈನ್ ಸ್ಥಳಾಂತರ ಕಾಮಗಾರಿಗಳನ್ನು ಮೆಸ್ಕಾಂ ನಡೆಸುತ್ತಿದೆ. ಬೆರಳೆಣಿಕೆ ಸಂಖ್ಯೆಯ ಸಿಬ್ಬಂದಿಗಳು ಈ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವುದರಿಂದ ಕಾಮಗಾರಿ ನಿಧಾನಗತಿಯಲ್ಲೇ ಸಾಗುತ್ತಿದೆ. ವಿದ್ಯುತ್ ಸಂಪರ್ಕವಿಲ್ಲದೆ ಪರಿಸರದ ಗ್ರಾಮಸ್ಥರು ತಮ್ಮ ಗೃಹಬಳಕೆ, ಕೃಷಿ, ಉದ್ಯಮಗಳನ್ನು ನಡೆಸಲು ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಜನರ ದೂರಿನ ಮೇರೆಗೆ ರಾತ್ರಿ ವೇಳೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ಮುಂದಾಗಿದ್ದರೂ ಉಲ್ಟಾಪಲ್ಟಾ ಸಂಪರ್ಕದಿಂದಾಗಿ ಕೃಷಿ, ಮನೆಯ ವಿದ್ಯುತ್ ಉಪಕರಣಗಳು, ಪಂಪ್‌ಸೆಟ್‌ಗಳು ಕೆಟ್ಟು ಹೋಗುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ವಿದ್ಯುತ್ ಅವ್ಯವಸ್ಥೆ ಬಗ್ಗೆ ಇಲಾಖಾಧಿಕಾರಿಗಳ ಸಂಪರ್ಕಕ್ಕೆ ಮುಂದಾದರೂ ಪ್ರಯೋಜನವಾಗುತ್ತಿಲ್ಲ ಎಂಬುವುದಾಗಿಯೂ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಗಳನ್ನು ಕಾಮಗಾರಿ ನಿಯೋಜಿಸಿ ತುರ್ತಾಗಿ ಕೆಲಸ ನಿರ್ವಹಿಸಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.