ಬೆಂಗಳೂರಿನಲ್ಲಿ ರಸ್ತೆ ಕಾಮಗಾರಿ ಅವಾಂತರ: ಸ್ಕೂಟರ್ ಅಪಘಾತಕ್ಕೀಡಾಗಿ ಯುವತಿ ಮೃತ್ಯು
Wednesday, January 25, 2023
ಬೆಂಗಳೂರು: ರಸ್ತೆ ಕಾಮಗಾರಿ ಕಾರಣ ಏಕಮುಖ ರಸ್ತೆಯಲ್ಲಿ ವಾಹನ ಸಂಚರಿಸುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿ ಎಂಬಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಇವರು ದ್ವಿಚಕ್ರ ವಾಹನ ಚಲಾಯಿಸುವ ವೇಳೆ ಈ ದುರ್ಘಟನೆ ನಡೆದಿದೆ.
ಖಾಸಗಿ ಶಾಲೆಯ ಉದ್ಯೋಗಿಯಾಗಿರುವ ನಳಿನಾ ಮೃತಪಟ್ಟ ಮಹಿಳೆ. ನಳಿನಾ ಅವರು ಇಂದು ಬೆಳಗ್ಗೆ ತನ್ನ ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಚಿಕ್ಕಗೊಲ್ಲರಹಟ್ಟಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸವಾರರು ಅನಿವಾರ್ಯವಾಗಿ ಏಕಮುಖ ರಸ್ತೆ ಬಳಸುತ್ತಿದ್ದಾರೆ. ಅದೇರೀತಿ ನಳಿನಾ ದ್ವಿಚಕ್ರ ವಾಹನದಲ್ಲಿ ಒನ್ ವೇಗೆ ಪ್ರವೇಶಿಸುತ್ತಿದ್ದಂತೆ ಕ್ಯಾಂಟರ್ ಅವರ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗುರುಳಿದ ನಳಿನಾ ಮೇಲೆಯೇ ಕ್ಯಾಂಟರ್ ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಕ್ಯಾಂಟರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.