ಆಳ್ವಾಸ್‌ನಲ್ಲಿ ಸಿನಿಮಾ ತರಬೇತಿ ಕಾರ‍್ಯಾಗಾರ ‘ಮುಕ್ತ’ ಬದುಕಿನ ಭಾವ ವ್ಯಕ್ತಪಡಿಸಿದ ಮೇದಿನಿ
ವಿದ್ಯಾಗಿರಿ: ‘ಒಬ್ಬ ವ್ಯಕ್ತಿ ಇನೊಬ್ಬ ವ್ಯಕ್ತಿಗೆ ಏನ್ನನ್ನೂ ಕಲಿಸಲಾರ, ಆದರೆ ಆತನಲ್ಲಿರುವ ಜ್ಞಾನವನ್ನು ಇತರರ ಅರಿವಿಗೆ ತರುವಲ್ಲಿ ಕಾರಣೀಕರ್ತನಾಗಬಹುದು" ಎಂದು ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕುವೆಂಪು ಸಭಾಂಗಣದಲ್ಲಿ ಸೋಮವಾರ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಮ್ಮಿಕೊಂಡಿದ್ದ 'ಕಿರು ಚಿತ್ರ ಪ್ರದರ್ಶನ ಮತ್ತು ಕಾರ್ಯಾಗಾರ'ದಲ್ಲಿ ಅವರು ಮಾತನಾಡಿದರು.
‘ಯಾರಿಗಾದರೂ ಕಲಿಸುವ ಆಸೆಯಿದ್ದರೆ, ಮೊದಲು ಕಲಿಯುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು’ ಎಂದರು.
ತಾವು ನಿರ್ದೇಶಿಸಿದ ‘ಮುಕ್ತ’ ಕಿರುಚಿತ್ರವನ್ನು ಪ್ರದರ್ಶಿಸಿದ ಹೆಗ್ಗೋಡಿನ ರಂಗಕರ್ಮಿ ಮೇದಿನಿ ಕೆಳಮನೆ, ‘ಭಯರಹಿತ, ಮುಕ್ತ ಬದುಕು ಜೀವಿಸುವ ಬಗೆಯ ಸಂದೇಶವನ್ನು ನೀಡಿದರು. ವಿದ್ಯಾರ್ಥಿಗಳೊಂದಿಗೆ ಕಿರು ಚಿತ್ರದ ಕುರಿತು ಚರ್ಚೆ ನಡೆಸಿದರು. ಸಿನಿಮಾ ನಿರ್ಮಾಣದ ಪೂರ್ವ ಹಂತ, ನಿರ್ಮಾಣ ಹಂತ, ನಂತರದ ಹಂತಗಳ ಬಗ್ಗೆ ವಿವರಿಸಿದರು. ಕಾಸ್ಟಿಂಗ್, ಚಿತ್ರೀಕರಣ, ಛಾಯಾಗ್ರಹಣದ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಸ್ವಯಂ ಅರಿವು ಮೂಡಿಸುವ ಚಟುವಟಿಕೆಗಳನ್ನು ನಡೆಸಿಕೊಟ್ಟರು. ನಿರ್ಭೀತಿಯಿಂದ ಬದುಕು ಕಟ್ಟುವ ಬಗೆಯನ್ನು ಮುಕ್ತವಾಗಿ ಬಿಚ್ಚಿಟ್ಟರು.
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಮತ್ತು ಸಹ ಪ್ರಾಧ್ಯಾಪಕ ಶ್ರೀನಿವಾಸ್ ಹೊಡೆಯಾಲ ಇದ್ದರು.
ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ವಿದ್ಯಾರ್ಥಿನಿ ಪವಿತ್ರಾ ಅತಿಥಿಗಳನ್ನು ಪರಿಚಯಿಸಿದರು. ಶಿಲ್ಪ ಕುಲಾಲ್ ವಂದಿಸಿದರು ಮತ್ತು ವಿದ್ಯಾರ್ಥಿನಿ ಕವನ ಕಾಂತಾವರ ಕಾರ್ಯಕ್ರಮ ನಿರೂಪಿಸಿದರು.