ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ AREST
ಮೈಸೂರು: ಮಹಿಳೆಯನ್ನು ವಂಚಿಸಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ, ವರದಕ್ಷಿಣೆ ಕಿರುಕುಳ ನೀಡಿದ ಆರೋಪವನ್ನು ಎದುರಿಸಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಸ್ಯಾಂಟ್ರೋ ರವಿ ವಿರುದ್ಧ ಎರಡನೇ ಪತ್ನಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಸಂಬಂಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತು. ಅದಾದ ಬಳಿಕ ಸ್ಯಾಂಟ್ರೋ ರವಿ ತಲೆಮರೆಸಿಕೊಂಡಿದ್ದನು.
ಇದೀಗ 11 ದಿನಗಳ ಬಳಿಕ ಸ್ಯಾಂಟ್ರೋ ರವಿಯನ್ನು ಗುಜರಾತ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ತನಗೆ ಲೈಂಗಿಕ ಸೋಂಕು ಇದೆ ಎಂದು ಗೊತ್ತಿದ್ದರೂ ಆರೋಪಿ ಪತಿ ರವಿ ನನಗೂ ಕೂಡ ಸೋಂಕನ್ನು ತಗುಲಿಸಿದ್ದಾನೆ. ವರದಕ್ಷಿಣೆ ಕಿರುಕುಳ ನೀಡಿ, ಒತ್ತಾಯಪೂರ್ವಕ ಗರ್ಭಪಾತ ಮಾಡಿದ್ದಾನೆ. ಹಣದ ದುರಾಸೆಗೆ ಬಿದ್ದು ಮತ್ತೊಬ್ಬರೊಂದಿಗೆ ಲೈಂಗಿಕ ಸಂಪರ್ಕ ಮಾಡುವಂತೆ ಯೂ ಒತ್ತಾಯಿಸಿದ್ದಾನೆ. ಆರೋಪಿಯು ಉದ್ಯೋಗ ನೀಡುವ ನೆಪದಲ್ಲಿ ಕರೆಸಿಕೊಂಡು ಮತ್ತು ಬರುವ ಜ್ಯೂಸ್ ನೀಡಿ, ಪ್ರಜ್ಞಾವಸ್ಥೆ ಕಳೆದುಕೊಂಡ ಬಳಿಕ ಅತ್ಯಾಚಾರವನ್ನು ನಡೆಸಿದ್ದ. ನನ್ನ ಬೆತ್ತಲೆ ಫೋಟೋಗಳನ್ನು ತೆಗೆದು ಬೆದರಿಕೆ ಹಾಕಿ ನಂತರ ವಿವಾಹವಾದ. ವಿವಾಹವಾದ ಬಳಿಕವೂ ಚಿತ್ರಹಿಂಸೆ ನೀಡಿದ ಎಂದು ಪತ್ನಿ ಆರೋಪ ಮಾಡಿದ್ದರು.
ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲೂ ಸ್ಯಾಂಟ್ರೋ ರವಿ ಹೆಸರು ಕೇಳಿತ್ತು. ಬಿಜೆಪಿ ಸಚಿವರ ಜೊತೆ ರವಿ ಕಾಣಿಸಿಕೊಂಡಿರುವ ಫೋಟೋಗಳು ಕೂಡ ವೈರಲ್ ಆಗಿದ್ದವು.
“ಸಿಎಂ ಕೂಡ ನನ್ನನ್ನು ಸರ್ ಎನ್ನುತ್ತಾರೆ” ಎಂದು ಈತ ಪೊಲೀಸ್ ಅಧಿಕಾರಿಯೊಬ್ಬರಿಗೆ ಧಮ್ಕಿ ಹಾಕಿದ್ದ ಆಡಿಯೋ ಕೂಡ ವೈರಲ್ ಆಗಿತ್ತು. ಹೀಗಾಗಿ ಬಿಜೆಪಿ ಪಕ್ಷದ ವಿರುದ್ಧ ಪ್ರತಿಪಕ್ಷಗಳು ಕಿಡಿಕಾರಿದ್ದವು.
“ಸ್ಯಾಂಟ್ರೋ ರವಿ ಬಂಧನದ ನಂತರವೇ ನಾನು ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತೇನೆ. ಸ್ಯಾಂಟ್ರೋ ರವಿ ಬಂಧನವಾಗುವರೆಗೂ ನಾನು ಮೈಸೂರಿನಲ್ಲಿ ಇರುತ್ತೇನೆ. ಎಂದು ಎಡಿಜಿಪಿ ಅಲೋಕ್ ಕುಮಾರ್ ಮೈಸೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ಬಳಿಕ ಹೇಳಿದ್ದರು