
ಯುಎಇ ಅಧಿಕಾರಿಯಂತೆ ನಟಿಸಿ ದೆಹಲಿ ಲೀಲಾ ಪ್ಯಾಲೇಸ್ ಗೆ 23 ಲಕ್ಷ ವಂಚನೆ- ಆರೋಪಿ ಮಂಗಳೂರಿನಲ್ಲಿ ಬಂಧನ
ನವದೆಹಲಿ: ಯುಎಇಯ ರಾಜಮನೆತನದ ಕಚೇರಿಯ ಅಧಿಕಾರಿಯಂತೆ ನಟಿಸಿ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ಗೆ ₹23.46 ಲಕ್ಷ ವಂಚಿಸಿದ ಆರೋಪಿಯನ್ನು ಮಂಗಳೂರಿನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಮಹಮದ್ ಷರೀಫ್ ಬಂಧಿತ ಆರೋಪಿ. ಈತನನ್ನು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 1ರಿಂದ ನವೆಂಬರ್ 20ರವರೆಗೆ ಮಹಮ್ಮದ್ ಶರೀಫ್ ಯುಎಇ ರಾಜಮನೆತನದ ಅಧಿಕಾರಿಯಂತೆ ಹೋಟೆಲ್‌ನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ತಂಗಿದ್ದ. ಈತ ವಂಚನೆ ಮಾಡಿದ ಬಗ್ಗೆ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಲೀಲಾ ಪ್ಯಾಲೇಸ್ ಹೋಟೆಲ್ ಮ್ಯಾನೇಜರ್ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಾಗಿತ್ತು.
ಈತ ಯುಎಇ ಸುಲ್ತಾನ್ ಶೇಕ್ ಫಲ್ಹಾ ಬಿನ್ ಜಾಯೇದ್ ಅಲ್ ನಹ್ಯಾನ್ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡಿದ್ದನು. ಹೋಟೆಲ್‌ಗೆ ನಂಬಿಸಲು ಆರಂಭದಲ್ಲಿ ಈತ ₹11.5 ಲಕ್ಷ ಹಣ ಪಾವತಿಸಿದ್ದ. ಆದರೆ, ಬಾಕಿ ₹23 ಲಕ್ಷ ಪಾವತಿಸದೇ ಪರಾರಿಯಾಗಿದ್ದನು.
ದೂರು ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಷರೀಫ್ ಶೋಧ ನಡೆಸಿ ಮಂಗಳೂರಿನಲ್ಲಿ ಬಂಧಿಸಿದ್ದಾರೆ.