ಮಂಗಳೂರಿನಲ್ಲಿ ಆರನೇ ತರಗತಿ ವಿದ್ಯಾರ್ಥಿ ಸಾವು- ಮೆದುಳು ಜ್ವರ (Japanese encephalitis) ದ ಶಂಕೆ
ಮಂಗಳೂರು: ತಲೆನೋವು, ಜ್ವರದಿಂದ ಕಳೆದೆರಡು ದಿವಸಗಳಿಂದ ಬಳಲುತ್ತಿದ್ದ ಉಳ್ಳಾಲ್ ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆಯ 6 ನೇ ತರಗತಿ ವಿದ್ಯಾರ್ಥಿ ಅಶ್ವಿತ್ ಸಾವನ್ನಪ್ಪಿದ್ದಾನೆ.
ಬಾಲಕ ಮೆದುಳು ಜ್ವರದಿಂದ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಜ್ವರದ ನಡುವೆಯೂ ಅಶ್ವಿತ್ ಶಾಲಾ ವಾರ್ಷಿಕೋತ್ಸವದ ಕಿರು ನಾಟಕದಲ್ಲಿ ಭಾಗವಹಿಸಲು ತಯಾರಿ ನಡೆಸಿದ್ದನು.
ಪ್ರತಿಭಾವಂತ ವಿದ್ಯಾರ್ಥಿಯ ಮರಣದಿಂದ ಶಾಲಾ ಆಡಳಿತ ಮಂಡಳಿ, ಕುಟುಂಬ ಹಾಗೂ ಸ್ಥಳೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. 2 ವರ್ಷಗಳ ಹಿಂದೆ ಅಶ್ವಿತ್ ನ ತಂದೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು. ಕೊಲ್ಯ ಸಾರಸ್ವತ ಕಾಲೊನಿಯ ಮನೆಯಲ್ಲಿ ಅಶ್ವಿತ್ ತಾಯಿಯೊಂದಿಗೆ ವಾಸವಿದ್ದನು.
ಅಶ್ವಿತ್ ಶಾಲೆಯಲ್ಲೂ ಪ್ರತಿಭಾನ್ವಿತನಾಗಿದ್ದು ಶಿಕ್ಷಕರ ಪ್ರೀತಿಗೆ ಪಾತ್ರನಾಗಿದ್ದ.ಮೃತ ಅಶ್ವಿತ್ ಗೆ ಕೊನೆಯ ಕ್ಷಣದಲ್ಲಿ ಮೆದುಳು ಜ್ವರದ ಲಕ್ಷಣ ಇತ್ತೆಂದು ತಿಳಿದುಬಂದಿದೆ. ಆತನಿಗೆ ಮೆದುಳು ಜ್ವರದ ವ್ಯಾಕ್ಸಿನೇಷನ್ ಆಗಿದೆಯೇ ಎಂದು ಧೃಡಪಟ್ಟಿಲ್ಲ. ಮೃತ ಬಾಲಕನ ಅಂತ್ಯ ಸಂಸ್ಕಾರ ಗುರುವಾರ ಮಧ್ಯಾಹ್ನ ನಡೆಯಿತು.