ಬೆಳ್ತಂಗಡಿಯ ಪುದುವೆಟ್ಟುವಿನಲ್ಲಿ ಅಣಬೆ ತಿಂದು ತಂದೆ ಮಗ ಸಾವು
Tuesday, November 22, 2022
ಮಂಗಳೂರು: ಕಾಡಿನಿಂದ ತಂದ ವಿಷಪೂರಿತ ಅಣಬೆಯನ್ನು ತಿಂದು ತಂದೆ ಮತ್ತು ಮಗ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟುವಿನಲ್ಲಿ ನಡೆದಿದೆ.
ಗುರುವ ಮೇರ (80)ಮತ್ತು ಅವರ ಮಗ ಓಡಿಯಪ್ಪ ( 41) ಮೃತಪಟ್ಟವರು.
ಮನೆಯಲ್ಲಿದ್ದವರು ಪುದುವೆಟ್ಟು ಪೇಟೆಗೆಂದು ಹೊರಟ ಸಮಯದಲ್ಲಿ ಓಡಿಯಪ್ಪ ಎಂಬವರು ಕಾಡಿನಿಂದ ಅಣಬೆಯನ್ನು ತಂದು ಪದಾರ್ಥಕ್ಕೆಂದು ಶುಚಿ ಮಾಡುತ್ತಿರುವುದನ್ನು ಇವರ ತಮ್ಮ ಕರ್ತ ಗಮನಿಸಿದ್ದರು. ತಂದೆ ಮನೆಯಲ್ಲಿಯೇ ಮಲಗಿಕೊಂಡಿದ್ದರು. ಬಳಿಕ ಇವರ ತಮ್ಮ ಪುದುವೆಟ್ಟು ಪೇಟೆಗೆಂದು ಹೋದವರು ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು.
ರಾತ್ರಿ ಅಣಬೆಯ ಪದಾರ್ಥ ಮಾಡಿ ತಿಂದ ತಂದೆ ಗುರುವ ಮತ್ತು ತಮ್ಮ ಓಡಿಯಪ್ಪ ಅಂಗಳದಲ್ಲಿ ಬಿದ್ದುಕೊಂಡು ಸಾವನ್ನಪ್ಪಿದ್ದರು.
ಇಂದು ಬೆಳಿಗ್ಗೆ ಕರ್ತ ಮನೆಗೆ ಬಂದಿದ್ದು, ಅವರಿಬ್ಬರನ್ನು ಆರೈಕೆ ಮಾಡಿ ನೋಡಿದಾಗ ಅವರಿಬ್ಬರೂ ಮೇಲೆ ಏಳದೇ ಇದ್ದು, ಬಳಿಕ ಸಂಬಂದಿಕರಿಗೆ ಹಾಗೂ ನೆರೆಕರೆಯವರಿಗೆ ವಿಚಾರ ತಿಳಿಸಿ ಅವರೆಲ್ಲ ಬಂದು ನೋಡಿದಾಗ ಗುರುವ ಮತ್ತು ಓಡಿಯಪ್ಪ ಮೃತಪಟ್ಟಿದ್ದು ತಿಳಿದುಬಂದಿದೆ.
ಮನೆಯ ಒಳಗೆ ಹೋಗಿ ನೋಡಿದಾಗ ಮೃತರಿಬ್ಬರೂ ವಿಷಕಾರಿ ಅಣಬೆಯನ್ನು ಪದಾರ್ಥ ಮಾಡಿ ತಿಂದು ಮೃತಪಟ್ಟಂತೆ ಕಂಡು ಬರುತ್ತಿದೆ ಎಂದು ದೂರು ದಾಖಲಾಗಿದೆ.