
UDUPI : ಜಾಗದ ತಕರಾರು : ಕಾರು ಹಾಯಿಸಿ ಕೊಲೆಗೆ ಯತ್ನ
ಜಾಗದ ತಕಾರಿಗೆ ಸಂಬಂಧಪಟ್ಟಂತೆ, ಕಾರು ಹಾಯಿಸಿ ಕೊಲೆಗೆ ಯತ್ನಿಸಿರುವುದಾಗಿ ವ್ಯಕ್ತಿಯೊಬ್ಬರು ನಾಲ್ಕು ಮಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಘಟನೆ ಉಡುಪಿಯ ಕುಂದಾಪುರದ ಸಿದ್ದಾಪುರ ಗ್ರಾಮದ ಬಾಳೆಬೇರು ಎಂಬಲ್ಲಿ ನಡೆದಿದೆ.
ಸುಧರ್ಶನ್ ಶೆಟ್ಟಿ ಎಂಬುವವರು, ರಾಜರಾಮ ಶೆಟ್ಟಿ, ರಘುರಾಮ ಶೆಟ್ಟಿ, ಶ್ರೀಧರ ಶೆಟ್ಟಿ ಮಂಗನಸಾಲು, ಬಿ.ಪ್ರಕಾಶ್ಚಂದ್ರ ಶೆಟ್ಟಿ ವಿರುದ್ಧ ದೂರು ನೀಡಿದ್ದಾರೆ. ಸಿದ್ದಾಪುರ ಗ್ರಾಮದಲ್ಲಿ ಜಾಗದ ವಿಚಾರದಲ್ಲಿ ತಕರಾರು ಇದ್ದು, ಈ ಜಾಗದ ತಕರಾರು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇದೆ.
ಕುಂದಾಪುರ ತಹಶೀಲ್ದಾರರಿಗೆ ನ್ಯಾಯಾಲಯ, ತಕರಾರು ಇರುವ ಜಾಗವನ್ನು ಸೆ.21 ರಂದು ಸರ್ವೇ ಮಾಡಿ ವರದಿ ನೀಡುವಂತೆ ಆದೇಶ ಮಾಡಿದೆ. ಸೆ.18 ರಂದು ಸುದರ್ಶನ್ ಶೆಟ್ಟಿ ಅವರು ತಮ್ಮ ಸ್ಕೂಟಿಯಲ್ಲಿ ಬಾಳೆಬೇರು ಎಂಬಲ್ಲಿ ಮನೆಯ ಸಮೀಪ ನಿಲ್ಲಿಸಿಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಕಾರಿನಲ್ಲಿ ಬಂದ ಈ ನಾಲ್ವರು, ಇವರ ಸ್ಕೂಟಿಯ ಮೇಲೆ ಕಾರು ಹಾಯಿಸಿದ್ದು, ಸುದರ್ಶನ್ ಶೆಟ್ಟಿರವರು ಜೋರಾಗಿ ಬೊಬ್ಬೆ ಹಾಕಿದಾಗ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಸುದರ್ಶನ್ ಶೆಟ್ಟಿ ಅವರು ಗಾಯಗೊಂಡಿದ್ದು, ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ಅಂತ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.