UDUPI : ವರದಕ್ಷಿಣೆ ಕಿರುಕುಳ : ಪತಿ ಸೇರಿ ಏಂಟು ಮಂದಿ ವಿರುದ್ಧ ಪ್ರಕರಣ ದಾಖಲು
Monday, September 5, 2022
ವರದಕ್ಷಿಣೆ ನೀಡುವಂತೆ ಪೀಡಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಮಹಿಳೆಯೊರ್ವಳು ಪತಿ ಹಾಗೂ ಆತನ ಮನೆಯ ಎಂಟು ಮಂದಿ ವಿರುದ್ಧ ದೂರು ದಾಖಲಿಸಿದ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಪ್ರಜ್ಞಾ ಎಂಬವರು ತಮ್ಮ ಗಂಡ ಭರತ್ ರಾಜ್ ಸೇರಿದಂತೆ ಆತನ ಮನೆಯ 8 ಮಂದಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರ್ಕಳದ ಬೆಳುವಾಯಿಯ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡಿಕೊಂಡಿರುವ ಪ್ರಜ್ಞಾ.ಜೆ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಬ್ರಹ್ಮಾವರದ ಪೇತ್ರಿಯ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಗುಮಾಸ್ತನಾಗಿದ್ದ ಕೊಕ್ಕರ್ಣೆಯ ಭರತ್ ರಾಜ್‌ನೊಂದಿಗೆ ಮದುವೆ ಆಗಿದ್ದರು. ಮದುವೆಯ ಸಮಯ ಪ್ರಜ್ಞಾ ಅವರ ತವರು ಮನೆಯಿಂದ 20 ಪವನ್ ಚಿನ್ನ ಹಾಗೂ 10 ಲಕ್ಷ ರೂ. ಹಣದೊಂದಿಗೆ ಮದುವೆಯ ಖರ್ಚು ವೆಚ್ಚ ನೋಡಿಕೊಂಡಿದ್ದರು. ಮಾತ್ರವಲ್ಲದೆ ಮದುವೆಗೆ ಮುಂಚಿತವಾಗಿ ಪತಿ ಭರತ್ ರಾಜ್ ಒಂದು ಲಕ್ಷ ಹಣವನ್ನು ಪಡೆದುಕೊಂಡಿದ್ದನಂತೆ. ಮದುವೆಯ ನಂತರ ಭರತ್ ಹಾಗೂ ಆತನ ತಂದೆ ಸದಾನಂದ ಕೂಡಾ ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ತರದೇ ಇದ್ದಲ್ಲಿ ಮಗನಿಗೆ ಬೇರೆ ಮದುವೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಜೊತೆಗೆ ಅತ್ತೆ ಪ್ರಭಾವತಿ ಮತ್ತು ನಾದಿನಿ ಭಾರತಿ ಕೂಡಾ ಕೆಲಸ ಬಿಡು, ತವರು ಮನೆಗೆ ಹೋಗಬೇಡ. ಮನೆಯಲ್ಲಿ ನಡೆದ ವಿಷಯವನ್ನು ಅವರಿಗೆ ಹೇಳಬಾರದು ಎಂದೆಲ್ಲಾ ಬೈಯುತ್ತಿದ್ದರು. ಅಲ್ಲದೇ ಕಳೆದ 9 ತಿಂಗಳಿನಿಂದ ವಿಪರೀತ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿರುವುದಾಗಿ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.