
UDUPI : ಬೈಕ್ - ಬೈಕ್ ಮುಖಾಮುಖಿ ; ಪತಿ ಸಾವು ಪತ್ನಿ ಗಂಭೀರ
ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ, ಪತಿ ಸಾವನ್ನಪ್ಪಿ ಪತ್ನಿ ಗಂಭೀರ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಯೆಡ್ತೆರೆ ಎಂಬಲ್ಲಿ ನಡೆದಿದೆ. ಜಗದೀಶ ಪಟ್ವಾಲ್ ಸಾವನ್ಪಿದ ಬೈಕ್ ಸವಾರ, ಅವರ ಪತ್ನಿ ಆಶಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೈಕಿನಲ್ಲಿ ಪತ್ನಿ ಆಶಾ ಅವರನ್ನು ಕುಳ್ಳಿರಿಸಿಕೊಂಡು, ಬಿಜೂರು ಕಡೆಯಿಂದ ಬಂದು ಕೊಲ್ಲೂರು ರಸ್ತೆ ಕಡೆಗೆ, ಜಗದೀಶ್ ಪಟ್ವಾಲ್ ಅವರು ಹೋಗುತ್ತಿದ್ದಾಗ, ಯಡ್ತರೆ ಜಂಕ್ಷನ್ ಬಳಿ ಮಹಮ್ಮದ್ ಇಬ್ರಾಹಿಂ ಎಂಬಾತ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಅಪಘಾತ ನಡೆದಿದೆ. ಬೈಕ್ ಸವಾರ ಜಗದೀಶ್ ಪಟ್ವಾಲ್ ಅವರ ಪತ್ನಿ ಆಶಾ ರಸ್ತೆಗೆ ಬಿದ್ದಿದ್ದು, ಗಂಭೀರ ಗಾಯಗೊಂಡ ಇಬ್ಬರನ್ನು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ, ದಾರಿಮಧ್ಯೆ ಜಗದೀಶ್ ಮೃತಪಟ್ಟಿದ್ದಾರೆ. ಆಶಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.