
UDUPI : ಜ್ಯುವೆಲರಿ ಅಂಗಡಿಗಳಲ್ಲಿ ಕಳ್ಳತನ ; 4 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು
Thursday, September 15, 2022
ಜ್ಯುವೆಲರಿ ಅಂಗಡಿಯ ರೋಲಿಂಗ್ ಶಟರ್ ಮುರಿದ ಕಳ್ಳರು 3,50,000 ಮೌಲ್ಯದ 5 ಕೆಜಿ ಹೊಸ ಬೆಳ್ಳಿ ಹಾಗೂ ಒಂದು ಕೆಜಿ ಹಳೆ ಬೆಳ್ಳಿ ಆಭರಣಗಳು ಸೇರಿದಂತೆ ಒಂದು ಪವನ್ ತೂಕದ ಎರಡು ಚಿನ್ನದ ಉಂಗುರಗಳನ್ನು ಕಳವು ಗೈದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ಕುಚೂರು ರಸ್ತೆಯಲ್ಲಿರುವ ಹರೀಶ್ ಹೆಗ್ಡೆ ಅವರಿಗೆ ಸೇರಿದ ಶ್ರೀಗಣೇಶ್ ಜ್ಯುವೆಲರಿ ಅಂಗಡಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಮತ್ತೊಂದು ಕಡೆ, ಹೆಬ್ರಿ ಕುಚೂರು ರಸ್ತೆಯಲ್ಲಿರುವ ರುದ್ರಯ್ಯ ಆಚಾರ್ಯ ಮಾಲೀಕತ್ವದ ಶ್ರೀ ರಾಜರಾಜೇಶ್ವರಿ ಜ್ಯುವೆಲ್ಲರ್‌ಗೆ ನುಗ್ಗಿದ ಕಳ್ಳರು ಶೋಕೇಸಿನಲ್ಲಿರಿಸಿದ್ದ 50 ಗ್ರಾಂ ಇರುವ ಬೆಳ್ಳಿಯ ಹವಳ ಇರುವ ಕನಕಮಾಲೆ ಬೆಳ್ಳಿಯ ಗುಂಡು ಇರುವ ಕರಿಮಣಿ ಸರ, ಬೆಳ್ಳಿಯ ಹಳೆಯ ಕರಿಮಣಿ ಸರವನ್ನು ಎಗರಿಸಿದ್ದಾರೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು 4 ಲಕ್ಷ ರೂ ಅಂತ ಅಂದಾಜಿಸಲಾಗಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.