
ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಕಡಿಮೆ ದರದಲ್ಲಿ ಸ್ಯಾನಿಟರಿ ಪ್ಯಾಡ್ ಗಳನ್ನು ಕೊಡಲು ಸಾಧ್ಯವೇ ಎಂಬ ವಿದ್ಯಾರ್ಥಿನಿ ಪ್ರಶ್ನೆಗೆ ಐಎಎಸ್ ಅಧಿಕಾರಿಯ ಇಂತಹ ಉತ್ತರ ನೀಡುವುದೇ
ಪಟ್ಟಾ: ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ನೀಡಲು ಸಾಧ್ಯವೇ ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಲೇಡಿ ಐಎಎಸ್ ಅಧಿಕಾರಿಯ ಅಹಂಕಾರದ, ಕೀಳುಮಟ್ಟದ ಮಾತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಗೆ ಒಳಗಾಗಿದೆ.
ಕೊಳೆಗೇರಿಯಲ್ಲಿ ವಾಸಿಸುವ ವಿದ್ಯಾರ್ಥಿನಿಯರು ಹಾಗೂ ಹೆಣ್ಣುಮಕ್ಕಳಿಗೆ 20-30 ರೂ.ಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಸರಕಾರ ನೀಡಬಹುದಲ್ಲ ಎಂದು ವಿದ್ಯಾರ್ಥಿನಿಯೊಬ್ಬಳು ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾರಿಗೆ ಕೇಳಿದ್ದಾಳೆ. ಈ ಪ್ರಶ್ನೆಗೆ ಭಮ್ರಾ, 'ನಾಳೆ ಸರ್ಕಾರ ಕಾಂಡೋಮ್‌ಗಳನ್ನು ನೀಡುತ್ತದೆ ಎಂದು ನಿರೀಕ್ಷಿಸುತ್ತೀರಾ' ಎಂದು ಅಸಂಬಂಧವಾಗಿ ಉತ್ತರಿಸಿದ್ದಾರೆ. ಈ ಉತ್ತರಕ್ಕೆ ಇದೀಗ ಇಡೀ ಮಹಿಳಾ ಸಮುದಾಯ ಕಿಡಿಕಾರಿದೆ.
ಸಶಕ್ತ ಭೇಟಿ , ಸಮೃದ್ಧ್ ಬಿಹಾರ ( 'ಸಶಕ್ತ ಹೆಣ್ಣುಮಕ್ಕಳು , ಸಮೃದ್ಧ ಬಿಹಾರ' ) ಸಂವಾದದಲ್ಲಿ ಈ ರೀತಿಯ ಅಸಹ್ಯ ಮಾತು ಕೇಳಿಬಂದಿರುವುದು ಅಧಿಕಾರಿಯ ವಿರುದ್ಧ ಮತ್ತಷ್ಟು ಕಿಡಿ ಕಾರುವಂತೆ ಮಾಡಲಾಗಿದೆ. 'ಸರ್ಕಾರವು ಜೀನ್ಸ್ ಕೂಡ ಕೊಡಬಹುದು ಎಂದು ನಾಳೆ ನೀವು ಹೇಳುತ್ತೀರಿ. ಬಳಿಕ ಸುಂದರವಾದ ಜೋಡಿ ಶೂಗಳು ಬೇಕು ಎನ್ನುತ್ತೀರಿ, ಅದನ್ನು ಕೊಟ್ಟ ಮೇಲೆ ಕುಟುಂಬ ಯೋಜನಾ ಮಾದರಿಗಳಾದ ಕಾಂಡೋಮ್ ಅನ್ನೂ ಸರ್ಕಾರ ನೀಡಲಿ ಎಂದು ನೀವು ನಿರೀಕ್ಷಿಸುತ್ತೀರಾ' ಎಂದು ಅಧಿಕಾರಿ ಹೇಳಿದ್ದಾರೆ.
ಜನರ ಮತಗಳಿಂದ ಸರ್ಕಾರ ಸೃಷ್ಟಿಯಾಗುತ್ತದೆ ಎಂದು ವಿದ್ಯಾರ್ಥಿನಿ ಅಧಿಕಾರಿಗೆ ನೆನಪಿಸಿದ್ದಾರೆ. ಆಗ ಮತ್ತೆ ಕುಹಕವಾಡಿದ ಅಧಿಕಾರಿ, 'ಇದು ಮೂರ್ಖತನದ ಪರಮಾವಧಿ. ಹಾಗಿದ್ದರೆ ಮತ ಹಾಕಬೇಡಿ. ಪಾಕಿಸ್ತಾನಿಗಳಾಗಿ, ನೀವು ಹಣ ಮತ್ತು ಸೇವೆಗಳಿಗೆ ಮತ ಹಾಕುತ್ತೀರಾ?' ಎಂದು ಪ್ರಶ್ನಿಸಿದ್ದಾರೆ. ಹಾಗಾದರೆ ಸರ್ಕಾರದ ಯೋಜನೆಗಳು ಏಕೆ ಅಸ್ತಿತ್ವದಲ್ಲಿವೆ ಎಂದು ಸಭಾಂಗಣದಲ್ಲಿದ್ದ ಸದಸ್ಯರೊಬ್ಬರು ಕೇಳಿದ್ದಾರೆ. 'ಈ ಆಲೋಚನೆಯಲ್ಲಿ ಬದಲಾವಣೆ ಮಾಡುವ ಅಗತ್ಯವಿದೆ' ಎಂದು ಭಮ್ರಾ ಹೇಳಿದ್ದಾರೆ.
ಬಳಿಕ ವೇದಿಕೆಯಲ್ಲಿದ್ದ ವಿದ್ಯಾರ್ಥಿನಿಯರತ್ತ ತಿರುಗಿ, 'ಭವಿಷ್ಯದಲ್ಲಿ ನಿಮ್ಮನ್ನು ನೀವು ಎಲ್ಲಿ ನೋಡಿಕೊಳ್ಳಲು ಬಯಸುತ್ತೀರಿ ಎನ್ನುವುದನ್ನು ನೀವೇ ನಿರ್ಧರಿಸಬೇಕು. ಸರ್ಕಾರ ಇದನ್ನು ನಿಮಗಾಗಿ ಮಾಡಲು ಸಾಧ್ಯವಿಲ್ಲ. ನೀವು ಎಲ್ಲಿ ಕೂತಿದ್ದೀರೋ ಅಲ್ಲಿಯೇ ಕೂರಲು ಬಯಸುತ್ತೀರಾ ಅಥವಾ ನಾನು ಕುಳಿತಿರುವಲ್ಲಿಯೇ?' ಎಂದು ಕೇಳಿದ್ದಾರೆ.