
ಕೇರಳದಲ್ಲಿ ಲಾಟರಿಯಲ್ಲಿ 25 ಕೋಟಿ ಗೆದ್ದದ್ದು ಇವರೆ...
ತಿರುವನಂತಪುರಂ: ಓಣಂ ಬಂಪರ್ ಲಾಟರಿಯಲ್ಲಿ ಕೇರಳದ ಆಟೋ ರಿಕ್ಷಾ ಚಾಲಕ ಶ್ರೀವರಾಹಂ ಮೂಲದ ಅನೂಪ್ ಅವರು 25 ಕೋಟಿ ರೂ ಬಹುಮಾನ ಗೆದ್ದಿದ್ದಾರೆ.
ಆಟೋ ರಿಕ್ಷಾ ಚಾಲಕ ಅನೂಪ್ ಅವರು ಬಾಣಸಿಗನಾಗಿ ಕೆಲಸ ಮಾಡಲೆಂದು ಮಲೇಷ್ಯಾಕ್ಕೆ ಹೋಗಲು ಯೋಜಿಸಿದ್ದರು. ಇದಕ್ಕಾಗಿ ಅವರು 3 ಲಕ್ಷ ರೂ.ಗಳ ಸಾಲದ ಅರ್ಜಿಯನ್ನೂ ಸಲ್ಲಿಸಿದ್ದು, ಅದು ಕೂಡ ಅಂಗೀಕಾರವಾಗಿತ್ತು. ಶನಿವಾರವಷ್ಟೆ ಟಿಕೆಟ್ ಖರೀದಿಸಿದ ಇವರಿಗೆ ಕೇವಲ ಒಂದೇ ದಿನದಲ್ಲಿ 25 ಕೋಟಿ ರೂ.ಗಳ ಓಣಂ ಬಂಪರ್ ಲಾಟರಿ ಬಂದಿದೆ.
ತಿರುವನಂತಪುರಂ ಬಳಿಯ ಶ್ರೀವರಾಹಂ ಮೂಲದ ಅನೂಪ್ ಎಂಬುವವರು ಖರೀದಿಸಿದ TJ 750605 ಸಂಖ್ಯೆಯ ಲಾಟರಿಗೆ ಬಂಪರ್ ಬಹುಮಾನ ಬಂದಿದೆ.
ಅನೂಪ್ ಅವರು ಕಳೆದ 22 ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು. ಈ ಹಿಂದೆ ಕನಿಷ್ಠ ನೂರರಿಂದ ಗರಿಷ್ಠ 5 ಸಾವಿರ ರೂ.ವರೆಗೆ ಮೊತ್ತದ ಲಾಟರಿ ಹಣವನ್ನು ಇವರು ಗೆದ್ದಿದ್ದಾರೆ. ಇಂದು ಫೋನ್ ಪರಿಶೀಲಿಸಿದಾಗ ಲಾಟರಿ ಗೆದ್ದಿರುವ ವಿಷಯ ಅವರಿಗೆ ಗೊತ್ತಾಗಿದೆ.
25 ಕೋಟಿ ರೂಪಾಯಿಗಳ ಬಂಪರ್ ಲಾಟರಿ ಗೆದ್ದ ಆಟೋ ಡ್ರೈವರ್ ಗೆ ಲಾಟರಿ ಗೆದ್ದಿರುವುದು ಮೊದಲಿಗೆ ನಂಬಲು ಸಾಧ್ಯವಾಗದೆ ಅದನ್ನು ಹೆಂಡತಿಗೆ ತೋರಿಸಿದ್ದಾರೆ. ಆಗ ಇದೇ ಲಾಟರಿ ಸಂಖ್ಯೆ ಎಂದು ಅವರ ಪತ್ನಿ ಖಚಿತಪಡಿಸಿದ್ದಾರೆ. ಆದರೂ, ಇದನ್ನು ಅವರು ನಂಬದೆ ಲಾಟರಿ ಟಿಕೆಟ್ ಮಾರಾಟ ಮಾಡುವ ಮಹಿಳೆಗೆ ಕರೆ ಮಾಡಿ ಟಿಕೆಟ್‌ನ ಫೋಟೋವನ್ನು ಕಳುಹಿಸಿದ್ದಾರೆ. ಅವರೂ ಕೂಡ ಇದೇ ವಿಜೇತ ಲಾಟರಿ ಸಂಖ್ಯೆ ಎಂದು ಖಾತ್ರಿಪಡಿಸಿದ ಬಳಿಕ ಅನೂಪ್ ಲಾಟರಿ ಗೆದ್ದಿದ್ದನ್ನು ನಂಬಿದ್ದಾರೆ.
ಅನೂಪ್ ಮೊದಲಿಗೆ ಬೇರೆ ಸಂಖ್ಯೆಯ ಟಿಕೆಟ್ ನೋಡಿದ್ದರು. ಆದರೆ, ಆ ಲಾಟರಿ ಸಂಖ್ಯೆ ಅವರಿಗೆ ಇಷ್ಟವಾಗದೆ ಬೇರೆಯದನ್ನು ಆಯ್ಕೆ ಮಾಡಿಕೊಂಡು ಬಂಪರ್ ಹೊಡೆದಿದ್ದಾರೆ
ಅನೂಪ್ ಚೆಫ್ ಆಗಿ ಕೆಲಸ ಮಾಡಲು ಮಲೇಷ್ಯಾಕ್ಕೆ ತೆರಳಲು ಮುಂದಾಗಿದ್ದು, ಇದಕ್ಕಾಗಿ ಸಾಲಕ್ಕಾಗಿ ಅರ್ಜಿಯನ್ನೂ ಹಾಕಿದ್ದರು. ಇವರಿಗೆ 3 ಲಕ್ಷ ರೂ. ಸಾಲದ ಅರ್ಜಿಯನ್ನು ಅಂಗೀಕರಿಸಲಾಗಿತ್ತು. ಆದರೆ, ಇದಾದ ಒಂದೇ ದಿನದಲ್ಲಿ ಇವರಿಗೆ ಲಾಟರಿ ಹೊಡೆದಿದೆ. ಸಾಲದ ಬಗ್ಗೆ ಇಂದು ಕೂಡ ಬ್ಯಾಂಕ್ ನವರು ಅನೂಪ್ ಅವರಿಗೆ ಕರೆ ಮಾಡಿದ್ದರು. ಆದರೆ, ಇನ್ಮುಂದೆ ಅದರ ಅಗತ್ಯವಿಲ್ಲ. ಮಲೇಷ್ಯಾಕ್ಕೆ ಹೋಗುವುದಿಲ್ಲ ಅಂತಾ ಅವರಿಗೆ ತಿಳಿಸಿದ್ದಾರೆ.
ಓಣಂ ಬಂಪರ್ ಲಾಟರಿಯಲ್ಲಿ 25 ಕೋಟಿ ರೂ.ಗಳ ಗೆದ್ದಿರುವ ಅನೂಪ್ ಅವರಿಗೆ ತೆರಿಗೆ ಕಡಿತ ಸೇರಿ ಕೊನೆಗೆ 15 ಕೋಟಿ ರೂ. ಹಣ ಕೈ ಸೇರಲಿದೆ.