ಮನೆ ಕಟ್ಟಲು ಹಣ ಬೇಕಾಗಿತ್ತು - ಅದಕ್ಕಾಗಿ ಈ ಶಿಕ್ಷಕ ಮಾಡಿದ ಖತರ್ನಾಕ್ ಕೆಲಸವೇನು?
Saturday, August 6, 2022
ಬೆಂಗಳೂರು: ರಾಜ್ಯ ಪಶುಸಂಗೋಪನೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವಾರು ಉದ್ಯೋಗಾಂಕ್ಷಿಗಳಿಂದ ಸುಮಾರು 25 ಲಕ್ಷ ವಸೂಲಿ ಮಾಡಿ ವಂಚಿಸಿದ್ದ ಅನುದಾನಿತ ಖಾಸಗಿ ಶಾಲೆಯ ಶಿಕ್ಷಕನೊಬ್ಬನನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಶಿಕ್ಷಕನು ಬಾಗಲಕೋಟೆಯಲ್ಲಿ ಹೊಸ ಮನೆ ಕಟ್ಟಲು ಮುಂದಾಗಿದ್ದು, ಇದಕ್ಕೆ ಹಣದ ಕೊರತೆ ಬಂದಾಗ ಈ ರೀತಿ ಮಾಡಿದ್ದೇನೆಂದು ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.
ಬಾಗಲಕೋಟೆಯ ಜ್ಞಾನದೇವ್ ಜಾಧವ್ ಬಂಧಿತ ಶಿಕ್ಷಕನಾಗಿದ್ದು, ತನಗೆ ಪಶುಸಂಗೋಪನೆ ಇಲಾಖೆ ಮಂತ್ರಿ ಪ್ರಭು ಚವ್ಹಾಣ್ ಆಪ್ತರು. ನಿಮಗೆ ಪಶುಸಂಗೋಪನೆ ಇಲಾಖೆಯಲ್ಲಿ ನೌಕರಿ ಕೊಡಿಸುತ್ತೇನೆ. ಅಲ್ಲದೆ ಪಶು ಸಂಗೋಪನೆ ಇಲಾಖೆಯು ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ), ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹಾಗೂ ಡಿ ದರ್ಜೆ ಸೇರಿದಂತೆ 93 ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ ಎಂದು ಹೇಳಿ ಉದ್ಯೋಗಾಂಕ್ಷಿ ಯುವಕರಿಗೆ ಗಾಳ ಹಾಕಿದ್ದ.
ಈ ಸಂಬಂಧ ನಕಲಿ ಅರ್ಜಿಗಳನ್ನು ವಿತರಿಸಿದ್ದಲ್ಲದೇ ಆಕಾಂಕ್ಷಿಗಳಿಂದ ಲಕ್ಷಾಂತರ ರೂ ಪಡೆದು ನಕಲಿ ನೇಮಕಾತಿ ಆದೇಶ ನೀಡಿದ್ದ.
ಹೀಗೆ ಆಯ್ಕೆಗೊಂಡ ಕೆಲವರು ಇಲಾಖೆಯನ್ನು ಸಂಪರ್ಕಿಸಿದಾಗ ವಂಚನೆ ಜಾಲ ಬೆಳಕಿಗೆ ಬಂದಿದೆ. ಕೂಡಲೇ ಎಚ್ಚೆತ್ತ ಜಂಟಿ ನಿರ್ದೇಶಕರು, ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.