UDUPI: ಮನೆಗೆ ನುಗ್ಗಿ ಕಳವು ಪ್ರಕರಣ : ಆರು ತಿಂಗಳ ಬಳಿಕ ಖದೀಮರು ಬಂಧನ
Sunday, July 3, 2022
ಆರು ತಿಂಗಳ ಹಿಂದೆ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಸಂತೋಷ್ ಪೂಜಾರಿ (36) ಹಾಗೂ ಮಟ್ಟು ನಿವಾಸಿ ರಾಕೇಶ್(37) ಬಂಧಿತರು. ಅವರಿಂದ 2,18,169 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಆರು ತಿಂಗಳ ಹಿಂದೆ ಉಡುಪಿ ಕಕ್ಕುಂಜೆಯ ಪ್ರಮೀಳಾ ಬಂಗೇರಾ ಎಂಬವರ ಮನೆಗೆ ನುಗ್ಗಿದ ಖದೀಮರು, ಒಟ್ಟು 9 ಪವನ್ ತೂಕದ ಚಿನ್ನಾ ಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಇವರ ಮನೆಗೆ ಬರುತ್ತಿದ್ದ ಸಂತೋಷ್‌ನ ಮೇಲೆ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಸಂತೋಷ್ ಪೂಜಾರಿಯನ್ನು ಉಡುಪಿ ಕೃಷ್ಣ ಮಠದ ಗೀತಾ ಮಂದಿರ ಬಳಿ ಮತ್ತು ರಾಕೇಶ್ ಪಾಲನ್‌ನ್ನು ಉಡುಪಿ ಉಜ್ವಲ್ ಬಾರ್ ಎದುರು ಬಂಧಿಸಿ, ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.