UDUPI : ಮಳೆಯಿಂದ ಹಾನಿಯಾದ ಮೂಲಸೌಕರ್ಯ ದುರಸ್ತಿಗೆ 500 ಕೋಟಿ ರೂ.ಗಳ ಅನುದಾನ
Wednesday, July 13, 2022
ಅತಿವೃಷ್ಟಿ, ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ಎಲ್ಲಾ ಜಿಲ್ಲೆಗಳಿಂದ ವರದಿ ಬಂದಿರುವ ಹಿನ್ನೆಲೆಯಲ್ಲಿ ತಕ್ಷಣವೇ ಹಾನಿಯಾದ ಮೂಲಸೌಕರ್ಯಗಳಿಗೆ ಅಂದರೆ ಆರ್.ಡಿ.ಪಿ.ಆರ್/ ಲೋಕೋಪಯೋಗಿ ರಸ್ತೆಗಳು , ವಿದ್ಯುತ್, ಸೇತುವೆ ದುರಸ್ತಿಗಾಗಿ 500 ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಪರಿಶೀಲನೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪುನಃ ಆಗಸ್ಟ್ ಮಾಹೆಯಲ್ಲಿ ಪರಿಶೀಲನೆ ಮಾಡಿ ಅಗತ್ಯಕ್ಕೆ ಅನುಸಾರವಾಗಿ ಹಣ ಬಿಡುಗಡೆ ಮಾಡಲಾಗುವುದು . ಪ್ರವಾಹವನ್ನು ಸಮರೋಪಾದಿಯಲ್ಲಿ ಎದುರಿಸಲು ಅಧಿಕಾರಿಗಳು, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಜಿಲ್ಲಾಡಳಿತ ಹಾಗೂ ಶಾಸಕರು ಸನ್ನದ್ದ ರಾಗಿದ್ದೇವೆ. ಜನರ ಸಂಕಷ್ಟ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಕಳೆದ ವರ್ಷ 14 ಲಕ್ಷ ಹೆಕ್ಟೇರ್ ಗೆ 1600 ಕೋಟಿ ರೂ.ಗಳನ್ನು ರೈತರ ಬೆಳೆಗಳಿಗೆ ಪರಿಹಾರವನ್ನು ಒಂದು ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಅದೇ ರೀತಿ ಈ ವರ್ಷವೂ ಕೂಡಲೇ ಹಣ ಬಿಡುಗಡೆ ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲೆಗಳಿಂದ ವರದಿ ಹಾಗೂ ಅಂದಾಜು ಪಟ್ಟಿ ಬಂದ ನಂತರ ಕೇಂದ್ರ ಸರ್ಕಾರಕ್ಕೆ ಪರಿಹಾಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
*ಬೆಳೆ ಮತ್ತು ಮನೆ ಹಾನಿಗೆ ಪರಿಹಾರ*
ಈ ವರ್ಷ ಜುಲೈ ಮಾಹೆಯಲ್ಲಿಯೇ ಅತಿವೃಷ್ಟಿಯಾಗಿದೆ. ಕರಾವಳಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜೂನ್ ವರೆಗೂ ಸಾಮಾನ್ಯವಾಗಿದ್ದ ಮಳೆ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಾಗಿ, ಮೈಸೂರು, ಕೊಡಗು, ಉಡುಪಿ, ಕಾರವಾರ ಭಾಗದಲ್ಲಿ ಬಿದ್ದಿದೆ. ಇಡೀ ರಾಜ್ಯದಲ್ಲಿ ಇದುವರೆಗೂ 32 ಜೀವ ಹಾನಿ, ಐದು ಜನರ ಕಣ್ಮರೆ, 34 ಜನರಿಗೆ ಗಾಯಗಳಾಗಿವೆ ಹಾಗೂ 300ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಿ ಉಳಿಸಲಾಗಿದೆ. 14 ಕಾಳಜಿ ಕೇಂದ್ರಗಳಿವೆ ಹಾಗೂ 4 ಎನ್.ಡಿ.ಆರ್.ಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಕೊಡಗು, ಬೆಳಗಾವಿ, ದಕ್ಷಿಣ ಕನ್ನಡ, ರಾಯಚೂರು ಜಿಲ್ಲೆಗಳಲ್ಲಿ ಈ ತಂಡಗಳು ಕೆಲಸ ಮಾಡುತ್ತಿವೆ. 4 ಎಸ್.ಡಿ.ಆರ್.ಎಫ್ ತಂಡಗಳು ಬೆಳಗಾಗಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಜನ ಮೃತ ಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸುಮಾರು 216 ಹೆಕ್ಟೇರ್ ಬೆಲೆ ಹಾನಿಯಾಗಿದೆ. 129 ಹೆಕ್ಟೇರ್ ಉಡುಪಿಯಲ್ಲಿ, ಉತ್ತರ ಕನ್ನಡದಲ್ಲಿ ಅಲ್ಪಪ್ರಮಾಣದಲ್ಲಿ ಆಗಿದೆ. ಕೃಷಿ ಮತ್ತು ತೋಟಗಾರಿಕೆ ಯ ಒಟ್ಟು 355 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ದಕ್ಷಿಣ ಕನ್ನಡ ದಲ್ಲಿ 429 ಮನೆಗಳು, ಉತ್ತರ ಕನ್ನಡ ಜಿಲ್ಲೆಯಲ್ಲಿ 437 ಮನೆಗಳು, ಉಡುಪಿಯಲ್ಲಿ 196 ಮನೆಗಳು ಹಾನಿಯಾಗಿವೆ. 1062 ಮನೆಗಳು ಹಾನಿಗೊಳಗಾಗಿವೆ. ಎ, ಬಿ, ಸಿ ವರ್ಗಗಳಿವೆ. ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿರುವ 58 ಮನೆಗಳು, 26 ತೀವ್ರ ಹಾನಿಗೊಳಗಾಗಿದ್ದು, ಅಲ್ಪ ಪ್ರಮಾಣದಲ್ಲಿ 1062 ಮನೆಗಳು ಹಾನಿಗೊಳಗಾಗಿವೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
*ರಸ್ತೆಗಳ ಹಾನಿ*
ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ರಸ್ತೆಗಳು ಸೇರಿ ದಕ್ಷಿಣ ಕನ್ನಡ- 727 ಕಿ.ಮಿ, ಉತ್ತರ ಕನ್ನಡ 500 ಕಿ.ಮೀ, ಉಡುಪಿ 960 ಕಿ.ಮೀ, 2187 ಕಿ.ಮೀ ರಸ್ತೆ ಹಾನಿಗೊಳಗಾಗಿವೆ.
*ವಿದ್ಯುತ್ ಸಂಪರ್ಕ*
ಮೂರು ಜಿಲ್ಲೆಗಳಲ್ಲಿ 5595 ವಿದ್ಯುತ್ ಕಂಬಗಳು ಬಿದ್ದಿವೆ. ಇವುಗಳನ್ನು ಪುನರ್ ಸ್ಥಾಪಿಸುವ ಕೆಲಸ ಭಾರದಿಂದ ಸಾಗಿದೆ. 422 ಟ್ರಾನ್ಸಫಾರ್ಮರ್ ಗಳ ದುರಸ್ತಿ ಕೆಲಸ ನಡೆದಿದೆ. 168 ಸೇತುವೆ ಮತ್ತು ಕನ್ವಲ್ಟ್ ಗಳು ಹಾನಿಯಾಗಿವೆ.
12 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಮನೆ ಬಿದ್ದ ತಕ್ಷಣ ಎನ್.ಡಿ.ಆರ್. ಎಫ್ ಪ್ರಕಾರ 3200 ರೂ.ಗಳನ್ನು ನೀಡಬೇಕಿತ್ತು. ರಾಜ್ಯ ಸರ್ಕಾರ 6800 ಅಧಿಕವಾಗಿ ನೀಡಿ 10 ಸಾವಿರ ರೂ.ಗಳನ್ನು ಹಾನಿಯಾದ ಮನೆಗಳಿಗೆ ತಕ್ಷಣ ನೀಡಬೇಕೆಂದು ಆದೇಶ ಹೊರಡಿಸಿದೆ. ಮನೆಹಾನಿಗೆ ಎ, ಬಿ, ಸಿ ವರ್ಗೀಕರಣ ಮಾಡಿ 'ಎ' ವರ್ಗಕ್ಕೆ ರೂ. 5 ಲಕ್ಷ, ಬಿ ವರ್ಗಕ್ಕೆ ರೂ. 3 ಲಕ್ಷ ರೂ.ಗಳು, ಅಲ್ಪ ಹಾನಿಯಾಗಿರುವ ಮನೆಗಳಿಗೆ 50 ಸಾವಿರ ರೂಗಳನ್ನು ನೀಡಲಾಗುವುದು. ಕೇಂದ್ರ ಸರ್ಕಾರ ಎ ವರ್ಗಕ್ಕೆ 95 ಸಾವಿರ ನೀಡಿದರೆ, ರಾಜ್ಯ ಸರ್ಕಾರ 4 ಲಕ್ಷ ಹೆಚ್ಚುವರಿ ಯಾಗಿ ನೀಡುತ್ತೇವೆ. ಬಿ ವರ್ಗಕ್ಕೆ 95 ಸಾವಿರ ನೀಡಿದರೆ ರಾಜ್ಯ ಸರ್ಕಾರ 3 ಲಕ್ಷ ಹೆಚ್ವಿಗೆ ನೀಡುತ್ತಿದ್ದೇವೆ. ಅಲ್ಪ ಹಾನಿಗೆ 5 ಸಾವಿರ ನೀಡಿದರೆ ನಾವು 50 ಸಾವಿರ ರೂ.ಗಳನ್ನು ನೀಡುತ್ತಿದ್ದೇವೆ ಎಂದರು.
*ಕೃಷಿ ಇನ್ ಪುಟ್ ಸಹಾಯಧನ*
ಬೆಳೆ ಹಾನಿಗೆ ಕೃಷಿ ಇನ್ ಪುಟ್ ಸಹಾಯಧನವನ್ನು ಒಣಬೇಸಾಯಕ್ಕೆ 6800 ಎನ್.ಡಿ.ಆರ್.ಎಫ್ ಅಡಿ ನೀಡಲಾಗುತ್ತದೆ. ರಾಜ್ಯ ಸರ್ಕಾರ 6800 ಸೇರಿಸಿ 13 ಸಾವಿರ ನೀಡುತ್ತಿದೆ. ಈ ವರ್ಷವೂ ಒಂದು ಹೆಕ್ಟೇರ್ ಗೆ 13,600 ರೂ.ಗಳ ಪರಿಹಾರ ಮುಂದುವರೆಸುತ್ತಿದ್ದೇವೆ. ನೀರಾವರಿ ಬೆಳೆಗಳಿಗೆ ಕೇಂದ್ರ ಸರ್ಕಾರ 13 500 ನೀಡಿದರೆ ರಾಜ್ಯ ಸರ್ಕಾರ 25 ಸಾವಿರ ನೀಡುತ್ತದೆ. ತೋಟಗಾರಿಕಾ ಬೆಳೆಗಳಿಗೆ ಕೇಂದ್ರ 18 ಸಾವಿರ ರೂ.ನೀಡಿದರೆ, ನಾವು 28 ಸಾವಿರ ನೀಡುತ್ತಿದ್ದೇವೆ. ಇದು ರಾಜ್ಯ ಸರ್ಕಾರ ರೈತರ ಅನುಕೂಲ ಕ್ಕಾಗಿ ಬೊಕ್ಕಸದಿಂದ ಹೆಚ್ಚುವರಿ ಯಾಗಿ ನೀಡುತ್ತಿದ್ದೇವೆ ಎಂದರು.
*ಕಾಳಜಿ ಕೇಂದ್ರ*
ಭಾರಿ ಮಳೆಯಿಂದಾಗಿ ತೀರಿಕೊಂಡವರಿಗೆ ಕೇಂದ್ರ ಸರ್ಕಾರ 4 ಲಕ್ಷ ರೂ.ಗಳ ಪರಿಹಾರ ಮೊತ್ತ ನೀಡುತ್ತದೆ, ರಾಜ್ಯ ಸರ್ಕಾರ 5 ಲಕ್ಷ ರೂ.ಗಳನ್ನು ನೀಡುತ್ತಿದೆ. ಕಾಳಜಿ ಕೇಂದ್ರಗಳಿಗೆ ಕೆಲವರು ಬಂದರೆ , ಕೆಲವರು ಬರುವುದಿಲ್ಲ. ಈ ಬಾರಿ ಅವರಿಗೆ ನೀಡುವ ಆಹಾರದಲ್ಲಿ ಪೌಷ್ಟಿಕಾಂಶ ನೀಡಲು ಮೊಟ್ಟೆ ನೀಡಲಾಗುತ್ತಿದೆ. ಸಂಬಂಧಿಕರ ಮನೆಗಲ್ಲಿ ಇರುವವರಿಗೆ ಆಹಾರ ಕಿಟ್ ನೀಡಲು ಆದೇಶ ನೀಡಿದೆ.
*ಭೂಕಂಪನದ ಅಧ್ಯಯನ*
ಕೊಡಗು ಹಾಗೂ ಕರಾವಳಿಯಲ್ಲಿ ವಿಶೇಷ ಸಮಸ್ಯೆಗಳಿವೆ. ಭೂಕಂಪನ ದ ಅಧ್ಯಯನ ಮಾಡಲು ಜಿಯೋಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ, ಬೆಂಗಳೂರು ಮೈಸೂರು ವಿವಿ ಇಂದ ಸುದೀರ್ಘ ಅಧ್ಯಯನ ಮಾಡಿ, ಪರಿಹಾರ ಸೂಚಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಪರಿಹಾರವಾಗಿ ರೆಟ್ರೋ ಫಿಟ್ಟಿಂಗ್ ಮಾಡಲು ಸಲಹೆ ನೀಡಿದ್ದಾರೆ. ಅದರ ಅಂತಿಮ ವರದಿ ನೀಡಲು ಆದೇಶಿಸಲಾಗಿದೆ.
*ಭೂ ಕುಸಿತ*
ಭೂ ಕುಸಿತ ತಡೆಯುವ ನಿಟ್ಟಿನಲ್ಲಿ ಅಮೃತ ವಿವಿ ಯವರು ಕೊಡಗು ಭಾಗದಲ್ಲಿ ಕೆಲಸ ಪ್ರಾರಂಭಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೂಡ ಪಶ್ಚಿಮ ಘಟ್ಟಗಳಲ್ಲಿಯೂ ಅಧ್ಯಯನ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ. ವರದಿಯಲ್ಲಿ ಹೇಳಿರುವ ಪರಿಹಾರಗಳ ಅನುಷ್ಠಾನಕ್ಕೆ ಸರ್ಕಾರ ಸಿದ್ಧವಿದೆ.
*ಕಡಲ ಕೊರೆತ*
ಹಲವಾರು ವರ್ಷಗಳಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರೂ, ಕಡಲ ಕೊರೆತ ನಿಂತಿಲ್ಲ. ಎಡಿಬಿ ಯೋಜನೆಯಡಿ 300 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. 330 ಕಿಮೀ ಕಡಲ ತೀರದುದ್ದಕ್ಕೂ ಮಾಡಬೇಕಾದರೆ ಎಡಿಬಿ ಕೆಲಸದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ವೇವ್ ಬ್ರೇಕರ್ ಎಂಬ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡುವ ಸಲುವಾಗಿ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಮಂಗಳೂರಿನ ಉಳ್ಳಾ ಲ ಭಾಗದಲ್ಲಿ ಪ್ರಾಯೋಗಿಕವಾಗಿ ಕೈಗೊಳ್ಳಲಾಗುವುದು. ಅದು ಯಶಸ್ವಿಯಾದರೆ ಇಡೀ ಕರಾವಳಿ ಭಾಗದಲ್ಲಿ ಅನುಷ್ಠಾನಕ್ಕೆ ತರುವ ಚಿಂತನೆ ನಮ್ಮದು. ಉನ್ನತ ಮಟ್ಟದ ಶಾಶ್ವತ ಸಮಿತಿ ರಚಿಸಲಾಗುವುದು. ಸಂಪೂರ್ಣ ಕರಾವಳಿಯ ಡಿಪಿಆರ್ ಸಿದ್ಧಪಡಿಸಿ ಬಾಹ್ಯ ಏಜೆನ್ಸಿಯ ಹಣಕಾಸಿನ ನೆರವಿನಿಂದ ಕೈಗೊಳ್ಳುವ ತೀರ್ಮಾನ ಮಾಡಲಾಗುವುದು. ಡಿಪಿಆರ್ ಗೆ ಅಗತ್ಯ ವಿರುವ ಅನುದಾನ ಕೂಡಲೇ ಬಿಡುಗಡೆ ಮಾಡಲಾಗುವುದು. ಅದರ ವಿಸ್ತೃತ ಅಧ್ಯಯನ ವಾದ ನಂತರ ಹಣಕಾಸಿನ ವ್ಯವಸ್ಥೆಗೆ ತೀರ್ಮಾನ ಮಾಡಲಾಗುವುದು.
ಕಡಲ ಕೊರೆತ ತಕ್ಷಣ ನಿಲ್ಲಿಸಲು ಜಿಲ್ಲಾಡಳಿತಕ್ಕೆ ಕೂಡಲೇ ಮೂರು ಜಿಲ್ಲೆಗಳಿಗೆ ಹಣವನ್ನು ಎಸ್ ಡಿ ಆರ್ ಎಫ್ ಅಡಿ ಒದಗಿಸಲಾಗುವುದು. ತಾತ್ಕಾಲಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದು ಎಂದರು. ಶಾಶ್ವತ ಪರಿಹಾರಕ್ಕೆ 2-3 ತಿಂಗಳಲ್ಲಿ ಯೋಜನೆ ರೂಪಿಸಲಾಗುವುದು. ಪ್ರತಿ ವರ್ಷ ಆಗುವ ಕಡಲ ಕೊರೆತ ತಡೆಯಲು ಜಿಲ್ಲಾಧಿಕಾರಿಗಳ ಹಂತದಲ್ಲಿ ಕೆಲವು ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸಬೇಕು ಎಂದು ಸೂಚನೆ ನೀಡಿದೆ. ವಿಶೇಷ ಅನುದಾನವನ್ನು ಇದಕ್ಕಾಗಿ ಒದಗಿಸಲಾಗುವುದು. ಸಣ್ಣ ಪ್ರಮಾಣದ ಕೆಲಸಗಳನ್ನು ಕೈಗೊಳ್ಳಲು ಅವಕಾಶ ನೀಡಲಾಗುವುದು ಎಂದರು.
ಮುಂದಿನ ವಾರದಲ್ಲಿ ಕಾರವಾರ, ಬೆಳಗಾವಿ, ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಪ್ರವಾಸ ಮಾಡಲಿದ್ದು ಅಲ್ಲಿಯೂ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.