
ದಲಿತ ಹೋರಾಟಗಾರ ಡೀಕಯ್ಯ ಸಾವಿನಲ್ಲಿ ಅನುಮಾನ - postmortemಗಾಗಿ ದಫನ ಮಾಡಿದ್ದ ಮೃತದೇಹ ಹೊರಗೆ
ಬೆಳ್ತಂಗಡಿ: ಇತ್ತೀಚೆಗೆ ಮೃತಪಟ್ಟಿದ್ದ ದಲಿತ ಹೋರಾಟಗಾರ ಪಿ ಡೀಕಯ್ಯ ಅವರ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿ ಅವರ ಅಕ್ಕನ ಗಂಡ ನೀಡಿದ ದೂರಿನ ಹಿನ್ನೆಲೆಯಲ್ಲಿ ಇಂದು ತಹಶಿಲ್ದಾರರ ಸಮ್ಮುಖದಲ್ಲಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಡೀಕಯ್ಯ ಅವರು ಮೂಲತಃ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ನಿವಾಸಿಯಾಗಿದ್ದು, ಪ್ರಸ್ತುತ ಗರ್ಡಾಡಿಯಲ್ಲಿ ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ ಜೊತೆ ನೆಲಿಸಿದ್ದರು.
ಜು.6 ರಂದು ಮನೆಯಲ್ಲೆ ಬಿದ್ದು ಮೆದುಳಿನ ರಕ್ತಸ್ರಾವದಿಂದ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಜು.8 ರಂದು ಮೃತಪಟ್ಟಿದ್ದರು.
ಪಿ.ಡೀಕಯ್ಯ ಅವರ ಅಕ್ಕನ ಗಂಡ ಪದ್ಮನಾಭ ಅವರು ಡೀಕಯ್ಯರ ಸಾವು ಅಸಹಜ ಎಂಬುದಾಗಿ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಜು.18 ರಂದು ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಹೊರತೆಗೆಯಲಾಗಿದೆ.