UDUPI : ಪುರಾತನ ಕಾಲದ ಆನೆ ನೀರು ಕುಡಿಯುವ ಕೊಪ್ಪರಿಗೆ ಪತ್ತೆ!
Friday, June 24, 2022
ಪುರಾತನ ಕಾಲದಲ್ಲಿ ಬಳಸಲಾಗುತ್ತಿದ್ದ, ಆನೆ ನೀರು ಕುಡಿಯುವ ಕೊಪ್ಪರಿಗೆ ಹಾಗೂ ಆನೆ ಕಟ್ಟುವ ಕಲ್ಲಿನ ಕಂಬ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿ ಪೇಟೆಯಲ್ಲಿ ಪತ್ತೆಯಾಗಿದೆ. 100 ವರ್ಷಗಳಿಗೂ ಹಿಂದಿನ ಕಾಲದ ರಾಜರ ಆನೆ ಕಟ್ಟುವ ಕಲ್ಲಿನ ಕಂಬ ಹಾಗೂ ಆನೆಗೆ ನೀರು ಕುಡಿಯಲು ನಿರ್ಮಿಸಿದ ಕಲ್ಲಿನ ಕೊಪ್ಪರಿಗೆ ಇದು ಎನ್ನಲಾಗಿದೆ. ಆನೆ ಕಟ್ಟುವ ಕಂಬ ಮೊದಲಿನಿಂದಲೂ ಇಲ್ಲಿ ರಸ್ತೆ ಬದಿ, ಕಾಣುತ್ತಿತ್ತು. ಕೊಪ್ಪರಿಗೆ ಹಿಂದೆ ಮಣ್ಣಿನ ಅಡಿಯಲ್ಲಿ ಹೂತು ಹೋಗಿ, ಕೊಪ್ಪರಿಗೆ ಕಾಣಿಸುತ್ತಿರಲಿಲ್ಲ. ಇಲ್ಲಿ ಆ ಕೊಪ್ಪರಿಗೆ ಇತ್ತು ಎಂಬ ಮಾತನ್ನು ಕೇಳಿದ ಇಲ್ಲಿನ ವಿದ್ಯಾರ್ಥಿಗಳಾದ ಸುಹಾಸ್ ಮಲ್ಯ, ಸಮರ್ಥ, ರಿತೀಶ್ ಹಾಗೂ ಅನ್ವಿತ್ ಮಲ್ಯ ಅವರು ಆಸಕ್ತಿಯಿಂದ ಅದನ್ನು ಹುಡುಕಿ, ಹೊರಗೆ ತೆಗೆದಿದ್ದಾರೆ. ಕೆಳದಿ ಶಿವಪ್ಪ ನಾಯಕನ ಕಾಲದ ಹೊನ್ನಯ್ಯ ಅರಸ ಮನೆತನದವರು ಆಳ್ವಿಕೆ ನಡೆಸಿದ್ದು, ಇದು ಅವರ ಕಾಲದಲ್ಲಿಯೇ ನಿರ್ಮಿಸಿರಬಹುದು ಎನ್ನಲಾಗಿದೆ..