ಎರಡನೇ ಮದುವೆಯಾಗಲು ಹೊರಟ 70ರ ವೈದ್ಯನನ್ನು ನೈಸಾಗಿ ಸುಲಿದ ಮಹಿಳೆ
Thursday, June 23, 2022
ಲಕ್ನೋ: ಪತ್ನಿ ತೀರಿಕೊಂಡ ನಂತರ ಮರುಮದುವೆಯಾಗಳು ಹೊರಟಿದ್ದ 70ರ ಹರೆಯದ ವೈದ್ಯನನ್ನು ಮಹಿಳೆಯೋರ್ವಳು ನೈಸಾಗಿ ದೋಚಿದ್ದು, ಸದ್ಯ ವೈದ್ಯ1 ಕೋಟಿ 80 ಲಕ್ಷ ರೂ ಕಳೆದುಕೊಂಡಿದ್ದಾರೆ.
ಲಕ್ನೋ ದ ಈ ವೈದ್ಯರ ಪತ್ನಿಯು ಮೂರು ವರ್ಷಗಳ ಹಿಂದೆ ತೀರಿಕೊಂಡಿದ್ದು ವೈದ್ಯರಿಗೆ ಒಂಟಿತನ ಕಾಡುತ್ತಿತ್ತು. ಹೀಗಾಗಿ ಮತ್ತೆ ಮದುವೆಯಾಗಲು ಯೋಚಿಸಿದ್ದರು. ಇದಕ್ಕಾಗಿ ವೈದ್ಯರು ಮದುವೆಯ ಜಾಹೀರಾತೊಂದನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಮದುವೆ ಜಾಹೀರಾತನ್ನು ಮುದ್ರಿಸಿದ ಬಳಿಕ ಹಲವು ಪ್ರಸ್ತಾವನೆಗಳು ಬಂದಿದ್ದು, ಈ ಮಹಿಳೆಯೂ ಈ ಮೂಲಕ ವೈದ್ಯರನ್ನು ಸಂಪರ್ಕಿಸಿದ್ದಳು.
ಈ 40 ವರ್ಷದ ಮಹಿಳೆ ತನ್ನನ್ನು ಕ್ರಿಶಾ ಶರ್ಮಾ ಎಂದು ಪರಿಚಯಿಸಿದ್ದು, ಈ ಬಳಿಕ ಕ್ರಿಶಾ ಜತೆಗೆ ವಾಟ್ಸಾಪ್ ಹಾಗೂ ಕರೆಗಳ ಮೂಲಕ ಮಾತುಕತೆ ಪ್ರಾರಂಭವಾಗಿದೆ. ತನ್ನನ್ನು ತಾನು ಮೆರೈನ್ ಇಂಜಿನಿಯರ್ ಎಂದು ಬಣ್ಣಿಸಿದ ಕ್ರಿಶಾ, ತಾನು ವಿಚ್ಛೇದಿತ ಮಹಿಳೆ ಮತ್ತು ಯುಎಸ್‌ಎಯ ಫ್ಲೋರಿಡಾದಲ್ಲಿ ವಾಸಿಸುತ್ತಿದ್ದೇನೆ ಎಂದು ನಂಬಿಸಿದ್ದಾರೆ.
ಬಳಿಕ ಮದುವೆಯಾಗುವ ಆಸೆಯನ್ನೂ ಹುಟ್ಟಿಸಿದ್ದಾಳೆ. ತಾನು ಚಿನ್ನವನ್ನು ಭಾರತಕ್ಕೆ ಕಳುಹಿಸುತ್ತಿದ್ದು, ಅದನ್ನು ಅಲ್ಲಿ ಪಡೆದುಕೊಳ್ಳಬೇಕು ಎಂದಿದ್ದ ಮಹಿಳೆ ಬಳಿಕ ಯಾರದೋ ಮೂಲಕ ಕರೆ ಮಾಡಿಸಿ ಕಸ್ಟಮ್ ಡ್ಯೂಟಿ ಮತ್ತು ಅನುಮತಿ ಶುಲ್ಕದ ಹೆಸರಿನಲ್ಲಿ ವೈದ್ಯರಿಂದ 1 ಕೋಟಿ 80 ಲಕ್ಷ ರೂ ಕೇಳಿದ್ದಾರೆ. ಇದನ್ನೂ ನಂಬಿ ವೈದ್ಯರೂ ಅವರಿಗೆ ಹಣ ಕಳುಹಿಸಿದ್ದಾರೆ.
ಬಳಿಕ ಕ್ರಿಶಾಗೆ ಕರೆ ಮಾಡಿದಾಗ ಅವರ ನಂಬರ್ ಸ್ವಿಚ್ ಆಫ್ ಆಗಿದ್ದು, ವೈದ್ಯರಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಅವರು ಲಕ್ನೋ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಎಡಿಸಿಪಿ ರಾಘವೇಂದ್ರ ಮಿಶ್ರಾ ಪ್ರಕಾರ, ವೈದ್ಯರ ದೂರಿನ ಮೇರೆಗೆ ಅವರು ಎಫ್‌ಐಆರ್ ದಾಖಲಿಸಿದ್ದಾರೆ