
ಹುಬ್ಬಳ್ಳಿಗೆ ಕಿಚ್ಚು ಹಚ್ಚಿದ 'ಆ' ಒಂದು post
Sunday, April 17, 2022
ಹುಬ್ಬಳ್ಳಿ: ಮಕ್ಕಾ ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಯುವಕನೋರ್ವ ಹಾಕಿದ ಪೋಸ್ಟ್‌ನಿಂದಾಗಿ ಹುಬ್ಬಳ್ಳಿಯಲ್ಲಿ ವಿವಾದ ತಾರಕಕ್ಕೇರಿ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಸೆಕ್ಷನ್ 144 ಜಾರಿಗೊಳಿಸಿದ್ದಾರೆ.
ಯುವಕನೊಬ್ಬ ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರವನ್ನು ಎಡಿಟ್ ಮಾಡಿ ಸ್ಟೇಟಸ್ ಹಾಕಿಕೊಂಡಿದ್ದ. ಈ ಚಿತ್ರ ವೈರಲ್ ಆಗುತ್ತಿದ್ದಂತೆ ಇನ್ನೊಂದು ಕೋಮಿನ ಯುವಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದರಿಂದಾಗಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಹತ್ತಿರ ಮತ್ತು ಆಸ್ಪತ್ರೆಯೊಂದರ ಮೇಲೆ ಶನಿವಾರ ತಡರಾತ್ರಿ ಕಲ್ಲು ತೂರಾಟ ನಡೆದಿದೆ. ಈ ವೇಳೆ ಘಟನೆಯನ್ನು ನಿಯಂತ್ರಿಸಲು ಮುಂದಾಗುತ್ತಿದ್ದ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರ ಮೇಲೆಯೂ ಕಲ್ಲು ಬಿದ್ದಿದ್ದು, ಐವರು ಗಾಯಗೊಂಡಿದ್ದಾರೆ. ವಾಹನಗಳ ಮೇಲೆಯೂ ಕಲ್ಲು ಎಸೆದು ಹಾನಿಗೊಳಿಸಲಾಗಿದೆ. ಬಳಿಕ ಅಶ್ರವಾಯು ಸಿಡಿಸಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಸೆಕ್ಷನ್ 144 ಜಾರಿಗೊಳಿಸಿದ್ದಾರೆ.
ಪ್ರಚೋದನಕಾರಿ ಸ್ಟೇಟಸ್ ಹಾಕಿದ ಯುವಕ ಮತ್ತು ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಇನ್ನಷ್ಟು ಮಂದಿ ಬಂಧಿಸಲ್ಪಡುವ ಸಾಧ್ಯತೆ ಇದೆ. ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಲಾಭೂರಾಮ್ ತಿಳಿಸಿದ್ದಾರೆ.