ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ವೇಳೆ ಭಾರೀ ದುರಂತ: ನದಿಯಲ್ಲಿ ಮುಳುಗಿ ಮದುಮಗ ಮೃತ್ಯು ಮದುಮಗಳ ಸ್ಥಿತಿ ಚಿಂತಾಜನಕ! Post wedding Photo Shoot
Monday, April 4, 2022
ಕೋಯಿಕ್ಕೋಡ್ (ಕೇರಳ): ಕೇರಳ ರಾಜ್ಯದ ಕೋಯಿಕ್ಕೋಡ್ ಸಮೀಪದ ಕುಟ್ಟಿಯಾಡಿಯಲ್ಲಿ ನವದಂಪತಿ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿದ್ದ ಸಂದರ್ಭ ಭಾರಿ ದುರಂತ ನಡೆದಿದೆ. ಈ ಫೋಟೋಶೂಟ್ ಮಾಡುತ್ತಿದ್ದ ಸಂದರ್ಭ ನದಿಯಲ್ಲಿ ಮುಳುಗಿ ಮದುಮಗ ಮೃತಪಟ್ಟರೆ, ಮದುಮಗಳ ಪರಿಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಡಿಯಂಗಡ ಮೂಲದ ರೆಜಿಲ್ ಮೃತಪಟ್ಟ ಮದುಮಗ. ಮದುಮಗಳು ಕಾರ್ತಿಕಾ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾರ್ಚ್ 14ರಂದು ರೆಜಿಲ್ ಹಾಗೂ ಕಾರ್ತಿಕಾ ವಿವಾಹ ನಡೆದಿತ್ತು. ಇದೀಗ ಅವರು ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಮಾಡಲೆಂದು ಕುಟ್ಟಿಯಾಡಿ ನದಿಗೆ ಬಂದಿದ್ದರು. ಈ ವೇಳೆ ಇಬ್ಬರೂ ನದಿಗೆ ಬಿದ್ದಿದ್ದಾರೆ. ನದಿಗೆ ಬಿದ್ದ ಬಳಿಕ ಇಬ್ಬರ ಚೀರಾಟ ಕೇಳಿ ಸ್ಥಳೀಯರು ದೌಡಾಯಿಸಿ ನದಿಗೆ ಹಾರಿ ಇಬ್ಬರನ್ನೂ ನೀರಿನಿಂದ ಮೇಲಕ್ಕೆತ್ತಿದ್ದಾರೆ.
ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ರೆಜಿಲ್ ಕೊನೆಯುಸಿರೆಳೆದಿದ್ದಾರೆ. ಇತ್ತ, ಅಸ್ವಸ್ಥರಾಗಿದ್ದ ಕಾರ್ತಿಕಾರನ್ನು ಮಲಬಾರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.