ಉಡುಪಿಯಲ್ಲಿ ಲಾರಿಗೆ ಕಾರು ಢಿಕ್ಕಿ; ನಿವೃತ್ತ SI ಪತ್ನಿ ಸಾವು
Monday, March 14, 2022
ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಕಾರು ಢಿಕ್ಕಿ ಹೊಡೆದು ಪಲ್ಟಿಯಾಗಿ ಕಾರಿನಲ್ಲಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾಪು ಸಮೀಪದ ತೆಂಕ ಎರ್ಮಾಳು ಎಂಬಲ್ಲಿ ಸಂಭವಿಸಿದೆ.
ಉಡುಪಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ನಿವೃತ್ತ ಎಸ್‌ಐ ಶ್ರೀನಿವಾಸ್ ಅವರ ಪತ್ನಿ ಉಡುಪಿ ಚಿಟ್ಟಾಡಿ ನಿವಾಸಿ ಭವಾನಿ (58) ಮೃತ ಮಹಿಳೆ.
ಆಲ್ಟೋ ಕಾರಿನಲ್ಲಿ ಮಂಗಳೂರಿನಿಂದ ಉಡುಪಿಯತ್ತ ಬರುತ್ತಿದ್ದಾಗ ದುರ್ಘಟನೆ ನಡೆದಿದೆ. ಭವಾನಿ ಅವರ ತಲೆಗೆ ತೀವ್ರ ಗಾಯಗಳಾದ ಕಾರಣ ಸಾರ್ವಜನಿಕರ ಸಹಕಾರದಿಂದ ಕಾರಿನಿಂದ ಹೊರ ತೆಗೆದು ಉಡುಪಿಯ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.
ಕಾರು ಚಲಾಯಿಸುತ್ತಿದ್ದ ಮಗ ತಾರಾನಾಥ್ (35) ಅವರಿಗೂ ಗಾಯಗಳಾಗಿವೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..