ಮಂಗಳೂರು: ಕುಖ್ಯಾತ ಕ್ರಿಮಿನಲ್ ಗಳಾದ ಪಿಂಕಿ ನವಾಝ್, ಆಕಾಶಭವನ ಶರಣ್ ಮೇಲೆ ಗೂಂಡಾ ಕಾಯ್ದೆ ಪ್ರಸ್ತಾವಕ್ಕೆ ರಾಜ್ಯ ಹೈಕೋರ್ಟು ಒಪ್ಪಿಗೆ
Tuesday, March 29, 2022
ಮಂಗಳೂರು: ಕುಖ್ಯಾತ ಕ್ರಿಮಿನಲ್ ಗಳಾಗಿರುವ ಮಂಗಳೂರಿನ ಪಿಂಕಿ ನವಾಝ್ ಹಾಗೂ ಆಕಾಶಭವನ ಶರಣ್ ಮೇಲೆ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯವು ಹಾಕಿರುವ ಗೂಂಡಾ ಕಾಯ್ದೆಗೆ ರಾಜ್ಯ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ. ಸದ್ಯ ಪಿಂಕಿ ನವಾಝ್ ಹಾಗೂ ಆಕಾಶಭವನ ಶರಣ್ ಇಬ್ಬರೂ ಬೆಂಗಳೂರು ಹಾಗೂ ವಿಜಯಪುರದ ಜೈಲಿನಲ್ಲಿದ್ದಾರೆ. ಆದ್ದರಿಂದ ಇಬ್ಬರನ್ನೂ ಒಂದು ವರ್ಷಗಳವರೆಗೆ ನ್ಯಾಯಾಂಗ ಬಂಧನದಲ್ಲಿಯೇ ಇರಿಸುವಂತೆ ರಾಜ್ಯ ಗೃಹ ಇಲಾಖೆ ಆದೇಶ ಮಾಡಿದೆ.
ಕೊಲೆ, ಕೊಲೆ ಯತ್ನ, ದರೋಡೆ, ಕಳವು ಸೇರಿದಂತೆ ಹಲವಾರು ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಬೇಕಾಗಿದ್ದ ಇಬ್ಬರನ್ನೂ ಮಂಗಳೂರು ಪೊಲೀಸರಿಗೆ ಕಂಬಿ ಹಿಂದೆ ತಳ್ಳಿದ್ದರು. ಅಲ್ಲದೆ ಈ ಇಬ್ಬರೂ ಕುಖ್ಯಾತ ಅಪರಾಧಿಗಳ ಮೇಲೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ನಗರ ಡಿಸಿಪಿ ಹರಿರಾಂ ಶಂಕರ್, ಉತ್ತರ ವಿಭಾಗದ ಎಸಿಪಿ ಮಹೇಶ್ ಕುಮಾರ್, ಎಸಿಪಿ ಸಿಸಿಆರ್‌ಬಿ ರವೀಶ್, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ರಾಘವ ಪಡೀಲ್, ಚಂದ್ರಪ್ಪ ಮತ್ತಿತರ ಪೊಲೀಸ್ ಅಧಿಕಾರಿಗಳು ಗೂಂಡಾ ಕಾಯ್ದೆ ಹಾಕಲೆಂದು ಸಂಬಂಧಪಟ್ಟ ದಾಖಲೆಗಳನ್ನು ಸಿದ್ಧಪಡಿಸಿದ್ದರು.
ಈ ಮೂಲಕ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಹಾಕಬೇಕೆಂದು ರಾಜ್ಯ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೀಗ ರಾಜ್ಯ ಹೈಕೋರ್ಟ್ ಒಪ್ಪಿಗೆ ನೀಡಿದೆ. ಅಲ್ಲದೆ ಆರೋಪಿಗಳಿಬ್ಬರ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆ ದಾಖಲೆ ಸಂಗ್ರಹಿಸಿದ್ದ ಪೊಲೀಸ್ ತಂಡಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು 1 ಲಕ್ಷ ರೂ. ಮೊತ್ತದ ಬಹುಮಾನ ಘೋಷಿಸಿದ್ದಾರೆ.