ಸಾರ್ವಜನಿಕ ಟಾಯ್ಲೆಟ್ ಅನ್ನೇ ಕದ್ದು ಮಾರಾಟ ಮಾಡಿದ ಆಟೊ ಚಾಲಕ: ಆತ ಮಾರಾಟ ಮಾಡಿದ ಬೆಲೆ ಎಷ್ಟೆಂದರೆ ದಂಗಾಗ್ತೀರಾ!
Monday, March 28, 2022
ಹೈದರಾಬಾದ್: ಈ ರೀತಿಯೂ ಪ್ರಪಂಚದಲ್ಲಿ ನಡೆಯುತ್ತದೆಯೇ ಎಂಬಂತಹ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಆಟೋ ಟ್ರಾಲಿ ಚಾಲಕನೋರ್ವನು ಸುಲಭವಾಗಿ ಸಾಗಾಟ ಮಾಡುವ ಸಾರ್ವಜನಿಕ ಟಾಯ್ಲೆಟ್ ಅನ್ನೇ ಕದ್ದು ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾನೆ.
ಟಾಯ್ಲೆಟ್ ಕದ್ದು ಸಾಗಾಟ ಮಾಡಿದ ಚಾಲಕನನ್ನು ಎಂ. ಜೋಗಯ್ಯ(36) ಎಂದು ಗುರುತಿಸಲಾಗಿದೆ.
ಆರೋಪಿ ಎಂ.ಜೋಗಯ್ಯ, ತನ್ನಿಬ್ಬರು ಸಹಚರರಾದ ಬುದ್ಧ ಭವನದ ಜಿಎಚ್‌ಎಂಸಿ ಕಾರ್ಯಕರ್ತ ಅರುಣ್ ಕುಮಾರ್ ಮತ್ತು ಮಲ್ಕಾಜ್‌ಗಿರಿಯ ಆನಂದಬಾಗ್‌ನಲ್ಲಿರುವ ಜೈನ್ ಕನ್‌ಸ್ಟ್ರಕ್ಷನ್‌ನ ಭಿಕ್ಷಪತಿ ಎಂಬುವರೊಂದಿಗೆ ಸೇರಿ ಸಾರ್ವಜನಿಕ ಟಾಯ್ಲೆಟ್ ಅನ್ನು ಕದ್ದು ಪರಾರಿಯಾಗಿದ್ದರು. ಆ ಬಳಿಕ ಕದ್ದ ಟಾಯ್ಲೆಟ್ ಅನ್ನು 45 ಸಾವಿರ ರೂ.ಗೆ ಮುಶೀರಾಬಾದ್ನಲ್ಲಿರುವ ಗುಜರಿ ವ್ಯಾಪಾರಿಗೆ ಮಾರಾಟ ಮಾಡಿದ್ದರು. ಅದರಿಂದ ಬಂದ ಹಣವನ್ನು ತನ್ನ ವೈಯಕ್ತಿಕ ಖರ್ಚಿಗಾಗಿ ಜೋಗಯ್ಯ ಇಟ್ಟುಕೊಂಡಿದ್ದ.
ಸ್ಥಳೀಯರು ನೀಡಿರುವ ದೂರಿನನ್ವಯ ಜಿಎಂಎಚ್ಸಿ ಉಪ ಪೊಲೀಸ್ ಆಯುಕ್ತ ಜಿ. ರಾಜು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದಾಗ ಜೋಗಯ್ಯ ಕದ್ದಿರೋದು ತಿಳಿದು ಬಂದಿದೆ. ಮೇದಕ್ ಜಿಲ್ಲೆಯ ದೊಮಲಗುಡ ಮೂಲದ ಆರೋಪಿ ಚಾಲಕ ಎಂ.ಜೋಗಯ್ಯನನ್ನು ಮಲ್ಕಜ್ಗಿರಿ ಪೊಲೀಸರು ಮಾರ್ಚ್ 21ರ ಸೋಮವಾರದಂದು ಬಂಧಿಸಿದ್ದಾರೆ.
ಹಣ ಹಾಗೂ ಆಟೋ ಟ್ರಾಲಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ತಲೆಮರೆಸಿಕೊಂಡಿರುವ ಆರೋಪಿ ಜೋಗಯ್ಯನ ಮತ್ತಿಬ್ಬರು ಸಹಚರರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.