
ತನ್ನ ತಾಯಿಯ ಹೆಸರನ್ನು ಪಕ್ಕದ ಮನೆಯಾತ ಹಚ್ಚೆ ಹಾಕಿಸಿಕೊಂಡಿದ್ದೇ ಯುವಕನ ಪ್ರಾಣಕ್ಕೆ ಕುತ್ತಾಯಿತು!
Monday, March 28, 2022
ತುಮಕೂರು: ಪಕ್ಕದ ಮನೆಯಾತನ ಕೈಯಲ್ಲಿ ತನ್ನ ತಾಯಿಯ ಹೆಸರು ಹಚ್ಚೆ ಹಾಕಿಸಿಕೊಂಡಿದ್ದರಿಂದ ಯುವಕನೋರ್ವನು ಪ್ರಾಣ ಕಳೆದುಕೊಳ್ಳುವಂತಾಗಿರುವ ದುರಂತವೊಂದು ತುಮಕೂರು ಜಿಲ್ಲೆಯಲ್ಲಿ ಸಂಭವಿಸಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಹೊಸದುರ್ಗ ಗ್ರಾಮದ ಹೊನ್ನುರಸ್ವಾಮಿ (35) ಪ್ರಾಣ ಕಳೆದುಕೊಂಡ ಯುವಕ.
ಕುಲಾಯಪ್ಪ ಎಂಬಾತ ಹೊನ್ನುರಸ್ವಾಮಿಯ ತಾಯಿಯ ಹೆಸರನ್ನು ತನ್ನ ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದ. ಈತನಿಗೆ ಹೊನ್ನುರಸ್ವಾಮಿಯ ತಾಯಿಯ ಜತೆ ಅಕ್ರಮ ಸಂಬಂಧವಿತ್ತು. ಈ ವಿಚಾರವಾಗಿ ಹೊನ್ನುರಸ್ವಾಮಿ ಮತ್ತು ಕುಲಾಯಪ್ಪ ಮಧ್ಯೆ ಹಲವಾರು ಬಾರಿ ಜಗಳವೂ ಆಗಿತ್ತು. ಈ ಬಗ್ಗೆ ರಾಜಿ ಪಂಚಾಯತಿಗೆಯನ್ನೂ ಮಾಡಿಸಲಾಗಿತ್ತು.
ಆದರೆ ಇದೀಗ ತನ್ನ ತಾಯಿಯ ಹೆಸರನ್ನು ಕುಲಾಯಪ್ಪನ ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದನ್ನು ನೋಡಿ ಹೊನ್ನುರಸ್ವಾಮಿ ಪ್ರಶ್ನೆ ಮಾಡಿದ್ದ. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಇದರಿಂದ ಕುಲಾಯಪ್ಪ ಹಾಗೂ ಆತನ ಸಹಚರರು ಹೊನ್ನುರಸ್ವಾಮಿ ಮೇಲೆ ಹಲ್ಲೆ ನಡೆಸಿದ್ದರು. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಹೊನ್ನುರಸ್ವಾಮಿಯನ್ನು ವೈ.ಎನ್.ಹೊಸಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೊನ್ನುರಸ್ವಾಮಿ ಮೃತಪಟ್ಟಿದ್ದಾನೆ. ಈ ಪ್ರಕರಣದ ಸಂಬಂಧ ವೈಎನ್ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.