ಪ್ರಿಯಕರ ಜೊತೆ ಇರಲು ತನ್ನ ಗಂಡನನ್ನೆ ಡ್ರಗ್ ಜಾಲದಲ್ಲಿ ಸಿಲುಕಿಸಿದ ಖತರ್ನಾಕ್ ಹೆಂಡತಿ
Thursday, March 3, 2022
ಇಡುಕ್ಕಿ: ತನ್ನ ಪ್ರಿಯಕರನ ಜೊತೆ ಇರಲು ಅಡ್ಡಿಯಾದ ಗಂಡನನ್ನೇ ಡ್ರಗ್ಸ್ ಜಾಲದಲ್ಲಿ ಸಿಲುಕಿಸಲು ಯತ್ನಿಸಿದ ಯುವತಿಯೋರ್ವಳು ಪೊಲೀಸರ ಬಲೆಗೆ ಬಿದ್ದ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ.
ಇಡುಕ್ಕಿಯ ವಂಡಾನ್ಮೇಡು ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿ.ಎಸ್ ನವಾಝ್ ಅವರ ಸರಿಯಾದ ತನಿಖೆಯಿಂದ ಅಮಾಯಕನೋರ್ವ ಸುಳ್ಳು ಪ್ರಕರಣದಲ್ಲಿ ಸಿಲುಕುವುದು ಇಲ್ಲವಾಗಿದೆ.
ಪ್ರಕರಣದ ವಿವರ: ಗ್ರಾಮ ಪಂಚಾಯತ್ ಸದಸ್ಯೆ ಸೌಮ್ಯ ಎಂಬವರ ಗಂಡ ಸುನಿಲ್ ಎಂಬವರ ಕಾರಿನಿಂದ ಒಂದು ದಿನ ಪೊಲೀಸರು ನಿಷೇಧಿತ ಮಾದಕವಸ್ತು ಎಂಡಿಎಂಎಯನ್ನು ವಶಕ್ಕೆ ಪಡೆದಿದ್ದರು. ಆದರೆ ಈ ಬಗ್ಗೆ ತನಗೆ ಗೊತ್ತೇ ಇಲ್ಲ ಎಂದಿದ್ದ.
ಆತನನ್ನು ಕೂಲಂಕಷವಾಗಿ ಪರಿಶೀಲಿಸಿದ ಸಿಐ ನವಾಝ್‌ಗೆ ಮೇಲ್ನೋಟಕ್ಕೆ ಆತ ನಿರಪರಾಧಿ ಎಂದು ತಿಳಿದುಬಂದಿತ್ತು. ಹೀಗಾಗಿ ಕಾರು ಮತ್ತು ಎಂಡಿಎಂ ಸೀಝ್ ಮಾಡಿದ್ದ ಪೊಲೀಸರು ಆತನನ್ನು ಬಿಟ್ಟಿದ್ದರು.
ಇನ್ನು ಆತನ ಹೆಂಡತಿ ಸೌಮ್ಯ ಸ್ಥಳೀಯ ರಾಜಕಾರಣಿ ಆದ್ದರಿಂದ ಅವಳ ಮೇಲಿನ ದ್ವೇಷ ಸಾಧಿಸಲು ಯಾರೋ ಈ ಕೃತ್ಯ ನಡೆಸಿರಬಹುದೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದರು. ಆದರೂ ಪೊಲೀಸರಿಗೆ ಯಾವುದೇ ಮಾಹಿತಿ ಸಿಗಲಿಲ್ಲ.
ಈ ನಡುವೆ ಆರೋಪಿಯನ್ನು ಸುಮ್ಮನೆ ಬಿಡಲಾಗಿದೆ ಎಂದು ಸಿಐ ಮೇಲೆ ಕೆಲವರು ರೊಚ್ಚಿಗೆದ್ದಿದ್ದರು.
ತನ್ನ ಗೌಪ್ಯ ಮಾಹಿತಿಯನುಸಾರ ತನಿಖೆ ಮುಂದುವರಿಸಿದ ಸಿಐ ನವಾಝ್‌ಗೆ ಕೊನೆಗೂ ಇದು ತನ್ನ ಗಂಡನನ್ನು ಸಿಲುಕಿಸಲು ಹೆಂಡತಿಯೇ ಮಾಡಿದ ಕೃತ್ಯ ಎಂದು ತಿಳಿದು ಬಂದಿತು.
ಸದ್ಯ ಹೆಂಡತಿ ಸೌಮ್ಯಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ಪ್ರಿಯಕರ ವಿನೋದ್ ಜೊತೆ ಇರಲು ಈ ಕೃತ್ಯ ನಡೆಸಿರುವುದಾಗಿ ತಿಳಿದು ಬಂದಿದೆ.