
ಮಾತನಾಡಲು ಇದೆ ಎಂದು ಹೊಟೇಲ್‌ಗೆ ಕರೆಸಿದಳು; ಮತ್ತು ಬರಿಸುವ ಔಷಧ ನೀಡಿ ನಗ್ನಗೊಳಿಸಿದಳು
Monday, March 21, 2022
ಬೆಂಗಳೂರು: ಉಪ ತಹಶಿಲ್ದಾರ್‌ರೊಬ್ಬರನ್ನು ಹನಿಟ್ರ್ಯಾಪ್ ಮಾಡಿ ರೂ. 25 ಲಕ್ಷ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಮಾನ ಹರಾಜು ಹಾಕುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೂವರನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಡಿಗೆಹಳ್ಳಿಯ ನಿವಾಸಿ ಗಣಪತಿ ನಾಯಕ್, ಸಂತೋಷ್ ಅಲಿಯಾಸ್ ಕಿಶನ್, ರಾಮೇಗೌಡ ಅಲಿಯಾಸ್ ಕೇಶವ್ ಬಂಧಿತರು. ಹನಿಟ್ರಾಪ್ ಮಾಡಿದಾಕೆ ಗದಗ ಮೂಲದ ಜ್ಯೋತಿ ವಿಶ್ವನಾಥ್ ತೋಪಗಿ ಅಲಿಯಾಸ್ ನಿಖಿತಾ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.
ಆರೋಪಿಗಳು ಹೊಸಕೋಟೆ ನಿವಾಸಿಯಾಗಿರುವ ಕೋಲಾರ ಜಿಲ್ಲೆ ಉಪ ತಹಸೀಲ್ದಾರ್ ಕೆ.ಗೌತಮ್ (40) ಅವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ .25 ಲಕ್ಷಕ್ಕೆ ಬೇಡಿಕೆ ಇರಿಸಿ ಬ್ಲಾಕ್‌ಮೇಲ್ ಮಾಡಿದ್ದರು.
ಗೌತಮ್ 2021ರ ಜುಲೈನಲ್ಲಿ ಹೊಸಕೋಟೆ ಸಮೀಪದ ಕಾಟಂನಲ್ಲೂರು ಕ್ರಾಸ್ ಬಳಿ ಇರುವ ಹೋಟೆಲ್‌ವೊಂದಕ್ಕೆ ಊಟಕ್ಕೆ ತೆರಳಿದ್ದರು. ಈ ವೇಳೆ ಹೋಟೆಲ್ ಸಿಬ್ಬಂದಿ ನಾಗರಾಜ್ ಎಂಬುವವರು ಪ್ಕಕದ ಟೇಬಲ್‌ನಲ್ಲಿದ್ದ ಜ್ಯೋತಿ ಎಂಬಾಕೆಯನ್ನು ಪರಿಚಯಿಸಿದ್ದರು. ಈ ವೇಳೆ ಜ್ಯೋತಿ, ಗೌತಮ್ ಅವರ ಮೊಬೈಲ್ ನಂಬರ್ ಪಡೆದುಕೊಂಡಿದ್ದಳು. ಬಳಿಕ ಮೆಸೇಜ್ ಮಾಡಲು ಆರಂಭಿಸಿದ್ದು, ಸಲುಗೆ ಬೆಳೆಸಿದ್ದಳು.
ಕೆಲ ದಿನಗಳ ಬಳಿಕ ಜ್ಯೋತಿ ಯಾವುದೋ ವಿಚಾರದ ಬಗ್ಗೆ ಮಾತನಾಡಬೇಕು ಎಂದು ಭಟ್ಟರಹಳ್ಳಿ ಸಮೀಪದ ಹೋಟೆಲ್‌ಗೆ ಗೌತಮ್ ಅವರನ್ನು ಬರುವಂತೆ ಹೇಳಿದ್ದಳು. ಅದರಂತೆ ಗೌತಮ್ ಆ ಹೋಟೆಲ್ ಬಳಿಗೆ ಹೋದಾಗ ಹೋಟೆಲ್‌ನ ಮೇಲ್ಭಾಗದ ರೂಮ್‌ವೊಂದಕ್ಕೆ ಕರೆದೊಯ್ದು ಕುಡಿಯಲು ತಂಪು ಪಾನೀಯ ಕೊಟ್ಟಿದ್ದಾಳೆ.
ಬಳಿಕ ಗೌತಮ್ ಅವರಿಗೆ ಮಂಪರು ಬಂದಂತಾಗಿದೆ. ಈ ವೇಳೆ ಆಕೆ ಗೌತಮ್ ಜತೆಗೆ ಅಶ್ಲೀಲವಾಗಿರುವ ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ. ಹಾಗೆಯೇ ವಿಡಿಯೋ ಮಾಡಿಕೊಂಡು ಸ್ಥಳದಿಂದ ಪರಾರಿಯಾಗಿದ್ದಳು. ಸುಮಾರು ಒಂದೂವರೆ ಗಂಟೆ ಬಳಿಕ ಎಚ್ಚರವಾದಾಗ ಗೌತಮ್ ನಗ್ನಾವಸ್ಥೆಯಲ್ಲಿದ್ದರು.
ಬಳಿಕ ಇದೇ ಫೋಟೋ, ವೀಡಿಯೋ ಗಳನ್ನಿಟ್ಟುಕೊಂಡು 25 ಲಕ್ಷ ರೂಪಾಯಿ ಗೆ ಬೇಡಿಕೆ ಇಟ್ಟಿದ್ದಳು.