ಉಡುಪಿ ಯಲ್ಲಿ ಕ್ಯಾನ್ಸರ್ ಪೀಡಿತ ಮಹಿಳೆಗೆ ಮೋಸ ಮಾಡಿದ ನಕಲಿ ವೈದ್ಯರು
Thursday, March 31, 2022
ನಕಲಿ ವೈದ್ಯನೋರ್ವ ಕ್ಯಾನ್ಸರ್ ಪೀಡಿತ ಮಹಿಳೆಯಿಂದ ಹಣ ತೆಗೆದುಕೊಂಡು ಮೋಸ ಮಾಡಿದ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ನಡೆದಿದೆ.
ಕುಕ್ಕುಹಳ್ಳಿ ನಿವಾಸಿಗಳಾದ ಕುಕ್ಕೆಹಳ್ಳಿಯಲ್ಲಿ ಕೂಲಿ ಕಾರ್ಮಿಕ ಸುಬ್ಬಣ್ಣ ಹಾಗೂ ಬೇಬಿ ಕುಲಾಲ್ ದಂಪತಿ ವಾಸವಾಗಿದ್ದಾರೆ. ಇವರಿಗೆ ಒಬ್ಬಳೇ ಮಗಳು,ಕಡು ಬಡತನದ ಕುಟುಂಬ. 4 ವರ್ಷಗಳ ಹಿಂದೆ ಬೇಬಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಾರೆ. ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೂ ಒಳಗಾಗುತ್ತಾರೆ.
2022ರ ಫೆ.5ರಂದು ಮನೆಯಲ್ಲಿ ಬೇಬಿ ಒಬ್ಬರೇ ಇದ್ದಾಗ ಅಪರಿಚಿತರಿಬ್ಬರು ಬೈಕ್‌ನಲ್ಲಿ ಬಂದು, ನಾವು ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಿಂದ ಬಂದಿರುವ ವೈದ್ಯರು ಎಂದು ಪರಿಚಯಿಸಿಕೊಳ್ಳುತ್ತಾರೆ. ನಿಮ್ಮ ಕ್ಯಾನ್ಸರ್ ಕಾಯಿಲೆಗೆ ಇನ್ನೂ ಮೂರು ಇಂಜಕ್ಷನ್‌ಗಳನ್ನು ನೀಡಬೇಕಾಗಿದೆ ಎಂದು ಇಲಾಖೆಗೆ ಸೂಚನೆ ಬಂದಿದೆ. ಇದರಿಂದ ನೀವು ಈಗಾಗಲೇ ಅನುಭವಿಸುತ್ತಿರುವ ನೋವು ಸಂಪೂರ್ಣವಾಗಿ ದೂರವಾಗಲಿದೆಂದು ನಂಬಿಸುತ್ತಾರೆ.
ಈಗಾಗಲೇ ಕ್ಯಾನ್ಸರ್ ನ ನೋವಿನಿಂದ ನೊಂದಿದ್ದ ಬೇಬಿ ಇವರ ಮಾತನ್ನು ನಂಬುತ್ತಾರೆ.ಹೀಗೆ ಬಣ್ಣಬಣ್ಣದ ಮಾತಿನಮೂಲಕನಂಬಿಸಿ, ಬೇಬಿಯವರಿಂದ ಹದಿನೆಂಟು ಸಾವಿರ ರೂ ಪೀಕಿಸಿದ್ದಾರೆ!.
ಹಣ ಪಡೆದುಕೊಂಡ ನಕಲಿ ವೈದ್ಯರು ,ಇಂದೇ ಔಷಧಿ ತರುತ್ತೇವೆ ಎಂದು ಹೇಳಿ ಅಲ್ಲಿಂದ ಪರಾರಿ ಯಾಗುತ್ತಾರೆ. ತಾವು ಮೋಸ ಹೋಗಿರಬಹುದೆಂದು ಶಂಕಿಸಿದ ದಂಪತಿ, ಕುಟುಂಬದ ವೈದ್ಯೆ ಡಾ.ಸುಮ ಶಶಿಕಿರಣ ಶೆಟ್ಟಿ ಅವರಿಗೆ ಮಾಹಿತಿ ನೀಡುತ್ತಾರೆ. ಹಣ ಪಡೆದುಕೊಂಡವರು ನಕಲಿ ವೈದ್ಯರು ಎಂಬುದು ಇವರಿಗೆ ಮನದಟ್ಟಾದ ಬಳಿಕ ಹಿರಿಯಡ್ಕ ಠಾಣೆಗೆ ದೂರು ನೀಡಿದ ಬಡ ದಂಪತಿ ,ಈಗ ನ್ಯಾಯಕ್ಕಾಗಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಕದ ತಟ್ಟಿದ್ದಾರೆ.