
ಮಂಗಳೂರು: ಬಾವಿಗೆ ಬಿದ್ದ ಜಿಂಕೆಯ ರಕ್ಷಿಸಿದ ಅಗ್ನಿಶಾಮಕ ದಳ
ಮಂಗಳೂರು: ನಗರದ ಹೊರವಲಯದಲ್ಲಿರುವ ಕಿನ್ಯಾ ಎಂಬಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಜಿಂಕೆಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಕಿನ್ಯಾದಲ್ಲಿ ಆಕಸ್ಮಿಕವಾಗಿ ಜಿಂಕೆಯೊಂದು ಬಾವಿಗೆ ಬಿದ್ದಿತ್ತು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ತಕ್ಷಣ ಸ್ಥಳಕ್ಕೆ ದೌಢಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಜಿಂಕೆಯನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಬಾವಿಗೆ ಬಿದ್ದ ರಭಸದಲ್ಲಿ ಜಿಂಕೆಯ ಬೆನ್ನು ಹಾಗೂ ಕಾಲಿಗೆ ಗಾಯವಾಗಿತ್ತು.
ಜಿಂಕೆಯನ್ನು ಮೇಲಕ್ಕೆತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಅದನ್ನು ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿದ್ದಾರೆ. ಗಾಯಗೊಂಡಿರುವ ಹಿನ್ನೆಲೆಯಲ್ಲಿ ಜಿಂಕೆಯನ್ನು ಅರಣ್ಯ ಇಲಾಖೆ ಪಶುಚಿಕಿತ್ಸಾಲಯಕ್ಕೆ ನೀಡಿದ್ದು, ಅಲ್ಲಿ ಚಿಕಿತ್ಸೆ ನಡೆಯುತ್ತಿದೆ.