
ವಿವಾಹವಾಗುವಂತೆ ಒತ್ತಾಯಿಸಿದ ಪ್ರೇಯಸಿಗೆ ಓವರ್ ಡೋಸ್ ಸಿರಿಂಜ್ ಚುಚ್ಚಿ ಹತ್ಯೆಗೈದ ಪ್ರಿಯಕರ!
ಅಲಿಗಢ(ಉತ್ತರ ಪ್ರದೇಶ): ವಿವಾಹವಾಗುವಂತೆ ಒತ್ತಾಯಿಸುತ್ತಿದ್ದ ಪ್ರೇಯಸಿಗೆ ಓವರ್ ಡೋಸ್ ಸಿರಿಂಜ್ ಚುಚ್ಚಿ ಪ್ರಿಯಕರನೇ ಕೊಲೆಗೈದಿರುವ ಘಟನೆ ಉತ್ತರಪ್ರದೇಶದ ಅಲಿಗಢದ ಕ್ವಾರ್ಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಆರೋಪಿ ಪ್ರಿಯಕರನನ್ನು ಬಂಧಿಸಿದ್ದಾರೆ.
ಮೃತಪಟ್ಟ ಯುವತಿಯ ಪೋಷಕರು ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಪ್ರಿಯಕರ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಮೃತ ಯುವತಿ ಹಾಗೂ ಆರೋಪಿ ರಿಜ್ವಾನ್ ಖಾಸಗಿ ನರ್ಸಿಂಗ್ ಹೋಂನಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಅದು ಇನ್ನೂ ಮುಂದಕ್ಕೆ ಹೋಗಿ ಇಬ್ಬರೂ ದೈಹಿಕ ಸಂಪರ್ಕವನ್ನೂ ಮಾಡಿದ್ದಾರೆ. ಆ ಬಳಿಕ ಆಕೆ ಮದುವೆ ಮಾಡಿಕೊಳ್ಳುವಂತೆ ಪ್ರಿಯಕರನನ್ನು ಒತ್ತಾಯಿಸಿದ್ದಾಳೆ.
ಒಂದು ವೇಳೆ ವಿವಾಹ ಮಾಡಿಕೊಳ್ಳಲು ನಿರಾಕರಿಸಿದಲ್ಲಿ ತನ್ನ ಜೊತೆಗಿದ್ದ ಸಂದರ್ಭದ ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಳು. ಇದರಿಂದ ಕುಪಿತಗೊಂಡ ರಿಜ್ವಾನ್, ಯುವತಿಗೆ ಚುಚ್ಚುಮದ್ದು ನೀಡಿ, ಕೊಲೆಗೈದಿದ್ದಾನೆ ಎನ್ನಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ. ಈ ಸಂದರ್ಭ ಓವರ್ ಡೋಸ್ ಇಂಜೆಕ್ಷನ್ ನೀಡಿರುವುದು ತಿಳಿದು ಬಂದಿದೆ. ಯುವತಿ ಸಾವನ್ನಪ್ಪಿದ್ದ ಸ್ಥಳದಲ್ಲಿ ಕೆಲವೊಂದು ಸಿರಿಂಜ್ಗಳು ಕೂಡಾ ಪತ್ತೆಯಾಗಿವೆ.