
ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ ರವಾನಿಸಿದ ದೈಹಿಕ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸುವಂತೆ ದೂರು!
ಪಿರಿಯಾಪಟ್ಟಣ: ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಪ್ರಚೋದನಕಾರಿ ಸಂದೇಶ ರವಾನೆ ಮಾಡಿರುವ ದೈಹಿಕ ಶಿಕ್ಷಕನ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರಕರಣ ದಾಖಲಿಸುವಂತೆ ದೂರು ನೀಡಿರುವ ಘಟನೆ ಜರುಗಿದೆ.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿ ವ್ಯಾಪ್ತಿಯಲ್ಲಿರುವ ಭುವನಹಳ್ಳಿ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ನಿತ್ಯಾನಂದ ಪಾಟಿಗಾರ್ ಆರೋಪಿ. ಇತನ ವಿರುದ್ಧ ನೊಂದ ವಿದ್ಯಾರ್ಥಿನಿಯ ಕುಟುಂಬಸ್ಥರು ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಭುವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿ 8 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈಕೆಗೆ ಕಾಮುಕ ದೈಹಿಕ ಶಿಕ್ಷಕ ಪ್ರತಿನಿತ್ಯ ತನ್ನ ಮೊಬೈಲ್ ನಿಂದ ಲೈಂಗಿಕ ಪ್ರಚೋದನಕಾರಿ ಸಂದೇಶಗಳನ್ನು ರವಾನಿಸುತ್ತಿದ್ದ. ಈ ಬಗ್ಗೆ ವಿದ್ಯಾರ್ಥಿನಿಯು ಅದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂಬಂಧಿ ಬಾಲಕನಿಗೆ ವಿಚಾರ ತಿಳಿಸಿದ್ದಾಳೆ. ಆತ ತನ್ನ ಮತ್ತೊಬ್ಬ ಸ್ನೇಹಿತನ ಬಳಿ ಈ ವಿಚಾರದ ಬಗ್ಗೆ ಚರ್ಚಿಸಿದ್ದಾನೆ. ಅಲ್ಲದೆ ಈ ಬಗ್ಗೆ ಆತ ನೇರವಾಗಿ ದೈಹಿಕ ಶಿಕ್ಷಕನಲ್ಲಿ ಪ್ರಶ್ನಿಸಿದ್ದಾನೆ.
ಈ ಬಗ್ಗೆ ದೈಹಿಕ ಶಿಕ್ಷಕ ವಿದ್ಯಾರ್ಥಿಯನ್ನು ಕರೆದು ವಿದ್ಯಾರ್ಥಿನಿಗೆ ಸಂದೇಶ ಕಳುಹಿಸುತ್ತಿರುವ ವಿಚಾರವನ್ನು ಯಾರಿಗಾದರೂ ಹೇಳಿದ್ದಲ್ಲಿ ಶಾಲೆಯಿಂದ ಹೊರ ಹಾಕುತ್ತೇನೆ ಎಂದು ಬೆದರಿಸಿ ಹಲ್ಲೆ ಮಾಡಿದ್ದಾನೆ. ಇದರಿಂದ ಮನನೊಂದ ಆ ವಿದ್ಯಾರ್ಥಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಇದೀಗ ದೈಹಿಕ ಶಿಕ್ಷಕನ ಮೇಲೆ ಪ್ರಕರಣ ದಾಖಲಿಸುವಂತೆ ದೂರು ದಾಖಲಿಸಿದ್ದಾರೆ.