ಅಂದು ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಯುವತಿ ಇಂದು ಕಂಪೆನಿಯೊಂದರ ಮ್ಯಾನೇಜರ್
Sunday, March 27, 2022
ಪಟನಾ: ಬೀದಿ ಬೀದಿಗಳಲ್ಲಿ ಅಲೆದಾಡಿ ಭಿಕ್ಷೆ ಬೇಡುತ್ತಿದ್ದ ಯುವತಿಯೊಬ್ಬಳು ಇಂದು ಕಂಪೆನಿಯೊಂದರ ಮ್ಯಾನೇಜರ್ ಅಂದರೆ ನೀವು ನಂಬುತ್ತೀರಾ?. ನಂಬಲಾಗದಿದ್ದರೂ ಇದೇ ವಾಸ್ತವ ಎನ್ನುವುದಂತೂ ಸತ್ಯ.
19 ವರ್ಷಗಳ ಹಿಂದೆ ಬಿಹಾರ ರಾಜಧಾನಿ ಪಟನಾದಲ್ಲಿ ತಾಯಿಯೊಬ್ಬಳು ಹೆಣ್ಣುಮಗುವೊಂದನ್ನು ಕಸದ ತೊಟ್ಟಿಗೆ ಎಸೆದು ಹೋಗಿದ್ದಳು. ಈ ಕಸದ ತೊಟ್ಟಿಗೆಯೊಳಗೆ ಹಸುಗೂಸು ಅಳುತ್ತಿತ್ತು. ಈ ಸಂದರ್ಭ ಕರಿದೇವಿ ಎಂಬ ಭಿಕ್ಷುಕಿ ಭಿಕ್ಷೆ ಬೇಡುತ್ತಾ ಅದೇ ದಾರಿಯಲ್ಲಿ ಬರುತ್ತಿದ್ದಳು. ಆಕೆಗೆ ಮಗು ಅಳುವ ದನಿ ಕೇಳಿದೆ. ತಕ್ಷಣ ಆಕೆ ಹೋಗಿ ನೋಡಿದಾಗ ಕಸದ ತೊಟ್ಟಿಯಲ್ಲಿ ಮಗು ಬಿದ್ದಿರುವುದು ಕಂಡಿದ್ದಾಳೆ. ಮಗುವಿನ ಬಗ್ಗೆ ಜೋರಾಗಿ ಕೂಗಿ ಹೇಳುತ್ತಾರೆ. ಯಾರೂ ಬರದಿದ್ದಾಗ ಏನು ಮಾಡಬೇಕೆಂದು ತೋಚದೇ ಮಗುವನ್ನು ಕಸದ ತೊಟ್ಟಿಯಿಂದ ಎತ್ತುಕೊಂಡು ತಾನು ವಾಸವಿದ್ದ ಕಡೆಗೆ ಹೋಗುತ್ತಾಳೆ.
ಕರಿದೇವಿ ಆ ಮಗುವಿಗೆ ಜ್ಯೋತಿ ಎಂದು ಹೆಸರಿಡುತ್ತಾರೆ. ಭಿಕ್ಷೆ ಬೇಡಿ, ಚಿಂದಿ ಆಯ್ದು ಅದರಿಂದ ಬಂದ ಹಣದಲ್ಲಿಯೇ ಮಗುವನ್ನು ಸಾಕುತ್ತಿರುತ್ತಾಳೆ. ಜ್ಯೋತಿ ಸ್ವಲ್ಪ ಬೆಳೆದ ಬಳಿಕ ಭಿಕ್ಷೆ ಬೇಡುತ್ತಾ, ಚಿಂದಿ ಆಯುತ್ತಾ ಸಾಕು ತಾಯಿಗೆ ಸಹಾಯ ಮಾಡುತ್ತಿರುತ್ತಾಳೆ. ಆದರೆ, ಅನಾರೋಗ್ಯದಿಂದ ಕರಿದೇವಿ ಮೃತಪಡುತ್ತಾಳೆ. ಆಗ ಜ್ಯೋತಿಗೆ 12 ವರ್ಷ ವಯಸ್ಸು. ಇದಾದ ಬಳಿಕ 'ರ್ಯಾಂಬೋ ಹೋಮ್ ಫೌಂಡೇಶನ್’ ಎಂಬ ಸಂಸ್ಥೆಯು ಜ್ಯೋತಿಯ ನೆರವಿಗೆ ಧಾವಿಸುತ್ತದೆ. ಆಕೆಗೆ ಶಿಕ್ಷಣವನ್ನು ಕೊಡಿಸುತ್ತಾರೆ. ಜ್ಯೋತಿ 10ನೇ ತರಗತಿ ಪರೀಕ್ಷೆಯನ್ನು ಬರೆದು ಒಳ್ಳೆಯ ಅಂಕಗಳೊಂದಿಗೆ ಉತ್ತೀರ್ಣಳು ಆಗುತ್ತಾಳೆ.
ಆ ಬಳಿಕ ಬಿಹಾರದ ಕಚೇರಿಯೊಂದರಲ್ಲಿ ಕೆಲಸಕ್ಕೆ ಸೇರುವ ಜ್ಯೋತಿ, ಜತೆಗೆ ಮಾರ್ಕೆಟಿಂಗ್ ಕೋರ್ಸ್ ಮಾಡುತ್ತಿರುತ್ತಾಳೆ. ಮಾರ್ಕೆಟಿಂಗ್ ಕೋರ್ಸ್ ಪೂರ್ಣಗೊಳಿಸಿದ ಬಳಿಕ ಸೇಲ್ಸ್ ಗರ್ಲ್ ಆಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರುತ್ತಾಳೆ. ಇದೀಗ ಆಕೆಯ ಪ್ರತಿಭೆಯನ್ನು ನೋಡಿ ಲೆಮನ್ ಕೆಫೆ ಎಂಬ ರೆಸ್ಟೊರೆಂಟ್ ಒಂದು ಮ್ಯಾನೇಜರ್ ಹುದ್ದೆಗೆ ಆಫರ್ ಮಾಡಿದೆ. ಜ್ಯೋತಿ ತಾನು ದುಡಿದ ಹಣದಲ್ಲಿ ಅರ್ಧದಷ್ಟನ್ನು ರ್ಯಾಂಬೋ ಹೋಮ್ ಫೌಂಡೇಶನ್ಗೆ ನೀಡುತ್ತಿದ್ದಾಳೆ. ಪಟನಾ ಜಂಕ್ಷನ್ನಲ್ಲಿ ಭಿಕ್ಷುಕಿಯಾಗಿ ಜೀವನ ಆರಂಭಿಸಿದ ಜ್ಯೋತಿ ಬದುಕಿನಲ್ಲಿ ಎದುರಾದ ತಿರುವಿನಲ್ಲಿ ಮ್ಯಾನೇಜರ್ ಆಗಿ ಸಂಸ್ಥೆಯೊಂದರಲ್ಲಿ ದುಡಿಯಲಾರಂಭಿಸಿದ್ದಾಳೆ.