3 ವರ್ಷಗಳಿಂದ ಕೂಡಿಟ್ಟ 1 ರೂ. ನಾಣ್ಯಗಳಿಂದಲೇ 2.6 ಲಕ್ಷ ರೂ. ಮೌಲ್ಯದ ಬೈಕ್ ಖರೀದಿಸಿದ ಯುವಕ!
Monday, March 28, 2022
ಸೇಲಂ(ತಮಿಳುನಾಡು): ಬಹುತೇಕ ಎಲ್ಲಾ ಯುವಕರಿಗೆ ಹೊಸ ಬೈಕ್ ಖರೀದಿ ಮಾಡಬೇಕೆನ್ನುವುದು ಕನಸಾಗಿರುತ್ತದೆ. ಅದಕ್ಕಾಗಿ ಸಾಲ ಸೋಲ ಮಾಡಿಯಾದರೂ, ಹೆತ್ತವರಲ್ಲಿ ಜಗಳ ಮಾಡಿಯಾದರೂ ಖರೀದಿ ಮಾಡುತ್ತಾರೆ. ಕೊನೆಗೂ ಏನಾದರೊಂದು ಕಸರತ್ತು ಮಾಡಿ ತಮ್ಮಿಷ್ಟದ ಬೈಕ್ ಖರೀದಿಸಿ ಸವಾರಿಯ ಮಜಾ ಅನುಭವಿಸುತ್ತಾರೆ.
ಆದರೆ, ಇಲ್ಲೊಬ್ಬ ಯುವಕ ತನ್ನಿಷ್ಟದ ಬೈಕ್ ಖರೀದಿಗಾಗಿ ಮಾಡಿರುವ ಸಾಹಸ ಕಂಡರೆ ಎಲ್ಲರೂ ಬೆರಗಾಗಲೇ ಬೇಕು. ಹೌದು ತಮಿಳುನಾಡಿನ ಸೇಲಂನ ವಿ. ಭೂಪತಿ ಎಂಬ ಯುವಕ ಕಳೆದ ಮೂರು ವರ್ಷಗಳಿಂದ ತಾನು ಕೂಡಿಟ್ಟಿರುವ 1 ರೂ. ನಾಣ್ಯಗಳಿಂದಲೇ 2.6 ಲಕ್ಷ ರೂ. ನೂತನ ಬೈಕ್ ಖರೀದಿಸಿದ್ದಾನೆ.
ಈತ ಬೈಕ್ ಖರೀದಿಗೆ ನೀಡಿದ 1 ರೂ. ಚಿಲ್ಲರೆ ಹಣವನ್ನು ಎಣಿಸಲು ಶೋ ರೂಂನವರು ಸರಿಸುಮಾರು 10 ಗಂಟೆ ಸಮಯ ತೆಗೆದುಕೊಂಡಿದ್ದಾರಂತೆ. ಸೇಲಂನ ವಿ. ಭೂಪತಿ ಬೈಕ್ ಖರೀದಿಸಲು ಕಳೆದ ಮೂರು ವರ್ಷಗಳಿಂದ 1 ರೂ.ಗಳನ್ನು ಕೂಡಿಡುತ್ತಾ ಬಂದಿದ್ದಾನೆ. ಈ 1 ರೂ. ನಾಣ್ಯಗಳನ್ನು ಹಿಡಿದುಕೊಂಡು ಶೋರೂಂಗೆ ತೆರಳಿ ನ್ಯೂ ಬಜಾಜ್ ಡಾಮಿನರ್ ಬೈಕ್ ಅನ್ನು ಖರೀದಿಸಿದ್ದಾನೆ.
ಬಿಎಸ್ಸಿ ಪದವೀಧರರಾಗಿರುವ ವಿ.ಭೂಪತಿ ಕಳೆದ ಹಲವು ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಹಳ ವರ್ಷಗಳಿಂದ ಅವರಿಗೆ ಬೈಕ್ ಖರೀದಿಸುವ ಕನಸಿತ್ತಿ. ಆದರೆ ಅಷ್ಟೊಂದು ಹಣವಿರಲಿಲ್ಲ. ಆದ್ದರಿಂದ, ಪ್ರತಿದಿನವೂ 1 ರೂ. ನಾಣ್ಯ ಸಂಗ್ರಹಿಸಲು ಆರಂಭಿಸಿದ್ದಾರೆ. ಇದೀಗ ಮೂರು ವರ್ಷಗಳ ಬಳಿಕ ತನ್ನಿಷ್ಟದ ಬೈಕ್ ಖರೀದಿ ಮಾಡುವ ಮೂಲಕ ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ವಿ.ಭೂಪತಿ ಯೂಟ್ಯೂಬ್ ಚಾನಲ್ ಕೂಡಾ ನಡೆಸುತ್ತಿದ್ದಾರೆ.