ಶ್ರೀಕ್ಷೇತ್ರ ಧರ್ಮಸ್ಥಳ ಸ್ನಾನಘಟ್ಟದಲ್ಲಿ ಚಿನ್ನಾಭರಣ ಕಳವುಗೈದ ಅಂತಾರಾಜ್ಯ ಕಳ್ಳ ಬಂಧನ: 2.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ
Tuesday, March 29, 2022
ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಯಾತ್ರಾರ್ಥಿಯೋರ್ವರ ಚಿನ್ನಾಭರಣ ಹಾಗೂ ನಗದು ಕದ್ದೊಯ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸಾಂಗೋಲ ತಾಲೂಕು ಮೂಲದ ಮಿಥುನ್ ಚೌವಾಣ್(31) ಬಂಧಿತ ಆರೋಪಿ.
ಶ್ರೀಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿಗೆ ಕುಂದಾಪುರದ ಶ್ರೀಧರ ನಾಯರಿ ಎಂಬವರು ಬಂದಿದ್ದರು. ಅವರು ಸ್ನಾನ ಮಾಡುವ ಸಂದರ್ಭ ತಮ್ಮ ಬ್ಯಾಗ್ ನಲ್ಲಿ ಇರಿಸಿದ್ದ ಚಿನ್ನಾಭರಣ ಹಾಗೂ ನಗದು ಕಳವುಗೈಯಲಾಗಿದೆ ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಆರೋಪಿಯಿಂದ ಕಳವುಗೈದಿರುವ 80 ಸಾವಿರ ರೂ. ಮೌಲ್ಯದ 37ಗ್ರಾಂ ತೂಕದ ಚಿನ್ನದ ಸರ, 32 ಸಾವಿರ ರೂ. ಮೌಲ್ಯದ 8.04 ಗ್ರಾಂ ತೂಕದ ಲಕ್ಷ್ಮಿ ಮಾಲೆ, 65 ಸಾವಿರ ರೂ. ಮೌಲ್ಯದ 16.230 ಗ್ರಾಂ ತೂಕದ ಚಿನ್ನದ ಸರ, 42 ಸಾವಿರ ರೂ. ಮೌಲ್ಯದ 10.02 ಗ್ರಾಂ ತೂಕದ ಬ್ರಾಸ್ ಲೈಟ್, 14,500 ರೂ. ಮೌಲ್ಯದ ಮತ್ತೊಂದು ಬ್ರಾಸ್ ಲೈಟ್, 8,500 ರೂ. ಮೌಲ್ಯದ 2.190 ಗ್ರಾಂ ತೂಕದ ಚಿನ್ನದ ಉಂಗುರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯಲ್ಲಿ ಒಟ್ಟು 2.40 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿತ್ತು ಎಂದು ಅಂದಾಜಿಸಲಾಗಿದೆ. ಆರೋಪಿ ದೇಶದ ವಿವಿಧ ಪ್ರಸಿದ್ಧ ಯಾತ್ರಾ ಸ್ಥಳಗಳಿಂದ ಕಳವುಗೈದಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.