
UDUPI-ಬ್ಯಾಗ್ ನಲ್ಲಿ ತುಂಬಿಸಿ ಮಹಿಳೆಯ ಕೊಲೆಯತ್ನ
ಮಣಿಪಾಲ: ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಲು ಬಂದ ತಂಡವೊಂದು ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ ಘಟನೆ ಮಣಿಪಾಲದ ಅನಂತನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಮಣಿಪಾಲ ಅನಂತ ನಗರದ ಹುಡ್ಕೊ ಕಾಲನಿಯಲ್ಲಿ ಮಣಿಪಾಲದಲ್ಲಿ ಹಾಲಿನ ಬೂತ್ ನಡೆಸಿಕೊಂಡಿರುವ ರಮಾನಂದ ರೈ ಅವರ ಪತ್ನಿ ಸುಮತಿ ಮನೆಯಲ್ಲಿ ಶುಕ್ರವಾರ ಸಂಜೆ ಒಬ್ಬಂಟಿಯಾಗಿ ಭಜನೆ ಮಾಡಿಕೊಂಡಿದ್ದು, ಅಪರಿಚಿತ ಇಬ್ಬರು ಗಂಡಸರು ಮನೆಯೊಳಗೆ ನುಗ್ಗಿ ಚಾಕುವಿನಿಂದ ಇರಿದು ಬಳಿಕ ಆಕೆಯನ್ನು ಗೋಣಿ ಚೀಲದಲ್ಲಿ ಕಟ್ಟಿ ಪೆಟ್ಟಿಗೆಯೊಂದರಲ್ಲಿ ತುಂಬಿಸುತ್ತಿದ ಸಮಯದಲ್ಲಿ ಕೆಲಸದಿಂದ ಮನೆಗೆ ವಾಪಾಸಾದ ಪತಿ ಘಟನೆಯನ್ನು ನೋಡಿ ಕೂಗಿಕೊಂಡಿದ್ದು, ಆರೋಪಿಗಳು ತಪ್ಪಿಸಿಕೊಂಡು ಓಡಿದ್ದಾರೆ.
ಈ ವೇಳೆ ಅನಂತನಗರ ಇಂಡಸ್ಟ್ರೀಯಲ್ ಏರಿಯಾದ ಬಳಿಯಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ಆರೋಪಿಗಳನ್ನು ಹಿಡಿದಿದ್ದಾರೆ. ಚೂರಿ ಇರಿತಕ್ಕೆ ಒಳಗಾದ ಮಹಿಳೆಯನ್ನು ಗಂಭೀರ ಸ್ಥಿತಿಯಲ್ಲಿದ್ದ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳು ಮಂಗಳೂರು ಕಡೆಯವರು ಎನ್ನಲಾಗಿದ್ದು ಕೊಲೆ ಮಾಡಲು ಬಂದ ಉದ್ದೇಶ ಪೊಲೀಸರ ತನಿಖೆಯಿಂದ ಹೊರಬರಬೇಕಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸರು ತನಿಖೆ ನಡೆಸುತ್ತಿದ್ದು ಆರೋಪಿಗಳ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ.