
ಮಂಗಳೂರಿನಲ್ಲಿ ಮೊಬೈಲ್ ದರೋಡೆಗೈದ ಆರೋಪಿಗಳನ್ನು ಚೇಸ್ ಮಾಡಿ ಬಂಧಿಸಿದ ಪೊಲೀಸರು: Video Viral
ಮಂಗಳೂರು: ಮೊಬೈಲ್ ಫೋನ್ ದರೋಡೆಗೈದ ಆರೋಪಿಗಳನ್ನು ಸಿನಿಮೀಯ ಮಾದರಿಯಲ್ಲಿ ಚೇಸ್ ಮಾಡಿ ಬಂಧಿಸಿರುವ ಘಟನೆ ನಿನ್ನೆ ನಗರದ ನೆಹರೂ ಮೈದಾನ ಪರಿಸರದಲ್ಲಿ ನಡೆದಿದೆ.
ಮಂಗಳೂರಿನ ನೀರುಮಾರ್ಗ, ಪಾಲ್ದನೆ ನಿವಾಸಿ ಹರೀಶ್ ಪೂಜಾರಿ (32), ಅತ್ತಾವರ ಬಾಬುಗುಡ್ಡೆ ನಿವಾಸಿ ಶಮಂತ್(20) ಬಂಧಕ್ಕೊಳಗಾದ ಆರೋಪಿಗಳು.
ಬಿಹಾರ ಮೂಲದ ಪ್ರೇಮ್ ನಾರಾಯಣ್ ಎಂಬವರು ಮಂಗಳೂರು ನಗರದಲ್ಲಿ ಟೈಲ್ಸ್ ಹಾಗೂ ಕೆಲಸ ಮಾಡುತ್ತಿದ್ದರು. ಇವರು ಎಂದಿನಂತೆ ಕೆಲಸ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸಂದರ್ಭ ಆರೋಪಿಗಳು ಅವರ ಮೊಬೈಲ್ ಕಿತ್ತು ಓಟಕ್ಕಿತ್ತಿದ್ದಾರೆ. ಈ ಸಂದರ್ಭ ಪ್ರೇಮ್ ನಾರಾಯಣ್ ಬೊಬ್ಬೆಯಿಟ್ಟು ಅವರನ್ನು ಬೆನ್ನಟ್ಟಿದ್ದಾರೆ. ಆಗ ಅಲ್ಲಿಯೇ ಸ್ಥಳದಲ್ಲಿದ್ದ ಪೊಲೀಸರು ಬೆನ್ನಟ್ಟಿ ಓರ್ವನನ್ನು ಬಂಧಿಸಿದಾಗ ಆತ ಮೊಬೈಲ್ ಕಿತ್ತು ಪರಾರಿಯಾಗಿರೋದು ತಿಳಿದು ಬಂದಿದೆ. ಅಷ್ಟರಲ್ಲಾಗಲೇ ಮತ್ತೋರ್ವನು ಅಲ್ಲಿಂದ ಪರಾರಿಯಾಗಿದ್ದ.
ಆಗ ಪೊಲೀಸರು ಉಪಾಯದಿಂದ ಬಂಧಿತ ಆರೋಪಿಯ ಮೂಲಕವೇ ಪರಾರಿಯಾದವನಿಗೆ ಫೋನ್ ಕರೆ ಮಾಡಿಸಿದ್ದಾರೆ. ಬಳಿಕ ಆತನಿದ್ದ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಬಂಧಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತ ಪೊಲೀಸರನ್ನು ತಳ್ಳಿ ಓಡಲಾರಂಭಿಸಿದ್ದಾನೆ. ಆದರೆ ತಕ್ಷಣ ಅಲರ್ಟ್ ಆದ ಪೊಲೀಸ್ ಸಿಬ್ಬಂದಿ ಆತನನ್ನು ಬೆನ್ನಟ್ಟಿ ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ. ಆರೋಪಿಗಳು 3-4 ಮಂದಿಯ ತಂಡ ಕಟ್ಟಿ ಇದೇ ರೀತಿ ಮೊಬೈಲ್, ಉಪಯುಕ್ತ ವಸ್ತುಗಳನ್ನು ದರೋಡೆ ಮಾಡುತ್ತಿದ್ದರೆಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.