
UAEಯ ಬೀದಿಗಳಲ್ಲಿ ಜೇನು ತುಪ್ಪ ಮಾರುತ್ತಿದ್ದ ಅರಬ್ ಯುವಕನ ಬಂಧನ: ಕಾರಣ ಗೊತ್ತಾ?
ಅಬುಧಾಬಿ: ಇಲ್ಲಿನ ಫುಜೈರಾ ನಗರದ ಟ್ರಾಫಿಕ್ ಸಿಗ್ನಲ್, ಬೀದಿಗಳಲ್ಲಿ ಜೇನುತುಪ್ಪ ಮಾರುತ್ತಿದ್ದ ಅರಬ್ ಯುವಕನನ್ನು ಯುಎಇ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂ ಗೆ ಬಂದ ಮಾಹಿತಿ ಆಧಾರದಲ್ಲಿ ಯುವಕನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರಿಗೆ ಅರಬ್ ಯುವಕ ಯಾವುದೇ ಪರವಾನಿಗೆ ಪಡೆಯದೇ ಜೇನುತುಪ್ಪ ಮಾರುತ್ತಿದ್ದ ಎಂದು ತಿಳಿದುಬಂದಿದೆ.
ಯುವಕನನ್ನು ಕೋರ್ಟ್ ಗೆ ಹಾಜರುಪಡಿಸಿದಾಗ ಆತ ಪರವಾನಿಗೆ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಜೇನುತುಪ್ಪ ಮಾರಾಟ ಮಾಡಿರುವುದಾಗಿ ಪ್ರಾಸಿಕೂಷನ್ ಮುಂಭಾಗ ಒಪ್ಪಿಕೊಂಡಿದ್ದಾನೆ.
ವಿಸಾ ನವೀಕರಣ ಕಾರ್ಯದಲ್ಲಿ ಬ್ಯುಸಿ ಆಗಿದ್ದರಿಂದ ಲೈಸೆನ್ಸ್ ಪಡೆಯಲು ಸಾಧ್ಯವಾಗಲಿಲ್ಲ. ಅಷ್ಟಕ್ಕೂ ನಾನೇನು ಜನರಿಂದ ಬಿಕ್ಷೆ ಎತ್ತಿಲ್ಲ. ಜೇನುತುಪ್ಪ ಮಾರಾಟ ಮಾಡಿದ್ದೇನಷ್ಟೇ ಎಂದು ಯುವಕ ವಾದ ಮಂಡಿಸಿದ್ದಾನೆ.
ಪೊಲೀಸರ ವಾದದ ಬಳಿಕ ಕೋರ್ಟ್ ತೀರ್ಪು ನೀಡಲಿದೆ.