ಟೀಚರ್ ಎಸೆದ ಪೆನ್ ವಿದ್ಯಾರ್ಥಿಯ ಭವಿಷ್ಯವನ್ನೇ ಕಸಿಯಿತು- ಘಟನೆಯ 16 ವರ್ಷದ ಬಳಿಕವೂ ಯುವಕನದ್ದು ಕತ್ತಲ ಜೀವನ: ಟೀಚರ್‌ಗೆ ನ್ಯಾಯಾಲಯ ಕೊಟ್ಟ ಶಿಕ್ಷೆ ಏನು ಗೊತ್ತಾ?
Sunday, October 3, 2021
ತಿರುವನಂತಪುರಂ: ತರಗತಿ ನಡೆಯುತ್ತಿದ್ದ ವೇಳೆ ಹಿಂದಿರುಗಿ ನೋಡಿದ ಎಂಬ ಕಾರಣಕ್ಕೆ ಅಧ್ಯಾಪಿಕೆಯು ವಿದ್ಯಾರ್ಥಿಗೆ ಎಸೆದ ಪೆನ್ ಆ ವಿದ್ಯಾರ್ಥಿಯ ಬದುಕನ್ನೇ ಕತ್ತಲೆಗೆ ದೂಡಿದೆ.
ಎಸೆದ ಪೆನ್ ವಿದ್ಯಾರ್ಥಿ ಯ ಕಣ್ಣಿನ ಒಳಗೆ ಪ್ರವೇಶಿಸಿದ್ದು, ಆ ಕಣ್ಣಿನ ದೃಷ್ಟಿಯೇ ಕಳೆದುಕೊಂಡಿತ್ತು. ಲಕ್ಷಾಂತರ ರೂ. ಖರ್ಚು ಮಾಡಿ ಹಲವು ಆಪರೇಷನ್ ಮಾಡಿದ್ದರೂ, ದೃಷ್ಟಿ ಮರಳಿ ಬಂದಿಲ್ಲ. ಡಾಕ್ಟರ್‌ಗಳು ಆ ಕಣ್ಣಿಗೆ ಎಂದೂ ದೃಷ್ಟಿ ಬರಲ್ಲ ಎಂದಿದ್ದರು.
ಈ ನಡುವೆ ಪ್ರಕರಣದ ಸಂಬಂಧ ನ್ಯಾಯಾಲಯ ಅಧ್ಯಾಪಿಕೆಗೆ ಒಂದು ವರ್ಷದ ಕಠಿಣ ಸಜೆಯನ್ನು ವಿಧಿಸಿದೆ. ವಿಪರ್ಯಾಸವೆಂದರೆ ಘಟನೆ ನಡೆದು 16 ವರ್ಷ ಕಳೆದರೂ ವಿದ್ಯಾರ್ಥಿಯ ಮನೆಯ ಪಕ್ಕದಲ್ಲೇ ವಾಸಿಸುವ ಟೀಚರ್ ಅವನತ್ತ ತಿರುಗಿಯೂ ನೋಡಿಲ್ಲವಂತೆ.
ಏನಿದು ಘಟನೆ?:
ಅಂದು 2005 ಜನವರಿ 18. ಅರೆಬಿಕ್ ಭಾಷಾ ಅಧ್ಯಾಪಿಕೆ ಶರೀಫಾ ಶಾಜಹಾನ್ ಮೂರನೇ ತರಗತಿಯಲ್ಲಿ ಮಧ್ಯಾಹ್ನದ ನಂತರ ಕ್ಲಾಸ್ ತೆಗೆದುಕೊಳ್ಳುತ್ತಿದ್ದಳು. ಈ ನಡುವೆ ತರಗತಿಯಲ್ಲಿದ್ದ ಅಲ್ ಅಮೀನ್ ಎಂಬ ಬಾಲಕ ಹಿಂದಿರುಗಿ ನೋಡಿದ್ದ. ದ್ವೇಷಗೊಂಡ ಶರೀಫಾ ಶಾಜಹಾನ್ ತನ್ನ ಬಳಿ ಇದ್ದ ಪೆನ್ನನ್ನು ನೇರ ಬಾಲಕ ಅಲ್ ಅಮೀನ್ ನತ್ತ ಎಸೆದಿದ್ದಳು.
ಈ ಪೆನ್ ಬಾಲಕನ ಕಣ್ಣಿನ ಒಳಗೆ ಚುಚ್ಚಿತ್ತು. ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿಂದ ಸರಕಾರಿ ಆಸ್ಪತ್ರೆ ಕಳುಹಿಸಿಕೊಡಲಾಗಿತ್ತು. ಕಣ್ಣಿನ ಗಂಭೀರ ಗಾಯದ ಹಿನ್ನೆಲೆಯಲ್ಲಿ ಕಣ್ಣಿನ ವಿಶೇಷ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ನಡೆಸಿದ ಶಸ್ತ್ರ ಚಿಕಿತ್ಸೆಯೂ ಫಲಕೊಟ್ಟಿಲ್ಲ. ಈ ಬಳಿಕ ಹಲವು ಶಸ್ತ್ರ ನಡೆಸಿದರೂ ಬಾಲಕನಿಗೆ ದೃಷ್ಟಿ ಮರಳಲಿಲ್ಲ.
ಸದ್ಯ ಬಾಲಕನಿಗೆ 25 ವರ್ಷ. ಮೀನು ಮಾರಾಟಗಾರನ ಮಗನಾಗಿರುವ ಈತನದ್ದು ಬಡ ಕುಟುಂಬ. ಇಷ್ಟು ವರ್ಷಗಳ ಕಾಲ ತಂದೆಯ ಆಸರೆಯಿಂದ ಬದುಕಿದ್ದ ಅಲ್ ಅಮೀನ್ ಇನ್ನು ಸ್ವಂತ ಕಾಲ ಮೇಲೆ ನಿಲ್ಲುವಾಸೆ. ಆದರೆ ಒಂದು ಕಣ್ಣು ದೃಷ್ಟಿ ಕಳೆದುಕೊಂಡಿರುವುದರಿಂದ ಎಲ್ಲಿಯೂ ಉದ್ಯೋಗ ದೊರಕುತ್ತಿಲ್ಲ ಎಂದು ಗದ್ಗದಿತರಾಗುತ್ತಾರೆ ಅಲ್ ಅಮೀನ್.
ಘಟನೆಗೆ ಕಾರಣವಾಗಿದ್ದ ಟೀಚರ್ ಶರೀಫಾ ಶಾಜಹಾನ್ ಅಲ್ ಅಮೀನ್ ನ ನೆರೆ ಮನೆಯ ನಿವಾಸಿಯಾಗಿದ್ದು, ಈ ತನಕ ಒಂದು ಸಾಂತ್ವನದ ಮಾತನ್ನೂ ಹೇಳಿಲ್ಲ ಎಂದು ಅಲ್ ಅಮೀನ್ ಕುಟುಂಬ ಬೇಸರ ವ್ಯಕ್ತಪಡಿಸಿದೆ.