ಪ್ರೀತಿಸುತ್ತಿದ್ದ ಜೋಡಿಯನ್ನು ಬೇರೆ ಮಾಡಲು ಯತ್ನಿಸಿದ ಕುಟುಂಬ: ಆತ್ಮಹತ್ಯೆ ಬಳಿಕ ಮೃತದೇಹಗಳಿಗೆ ಮದುವೆ
Tuesday, August 3, 2021
ಜಲಗಾಂವ್(ಮಹಾರಾಷ್ಟ್ರ): ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದರ ಮದುವೆಗೆ ಕುಟುಂಬಸ್ಥರೇ ಅಡ್ಡಿಯಾಗಿದ್ದರು. ಇದರಿಂದ ಮನನೊಂದು ಜೋಡಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮೃತದೇಹಕ್ಕೆ ಮದುವೆ ಮಾಡಿಸಿದ ಘಟನೆ ಮಹಾರಾಷ್ಟ್ರದ ಜಲಗಾಂವ್ನ ಹಳ್ಳಿಯೊಂದರಲ್ಲಿ ನಡೆದಿದೆ.
ಪಲಾಡ್ ಗ್ರಾಮದ ಮುಖೇಶ್(22) ಹಾಗೂ ನೇಹಾ(19) ಆತ್ಮಹತ್ಯೆ ಮಾಡಿಕೊಂಡ ಜೋಡಿ.
ಮುಖೇಶ್ ಹಾಗೂ ನೇಹಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳಲು ಉತ್ಸುಕರಾಗಿದ್ದ ಜೋಡಿ ವಿಷಯವನ್ನು ಕುಟುಂಬಸ್ಥರ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಆದರೆ, ಇಬ್ಬರೂ ಒಂದೇ ಗೋತ್ರಕ್ಕೆ ಸೇರಿದ್ದಾರೆಂಬ ಕಾರಣಕ್ಕಾಗಿ ಕುಟುಂಬಸ್ಥರು ಮದುವೆಗೆ ನಿರಾಕರಣೆ ಮಾಡಿದ್ದಾರೆಂದು ತಿಳಿದು ಬಂದಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದು, ಒಟ್ಟಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಆತ್ಮಹತ್ಯೆ ಮಾಡುವುದಕ್ಕಿಂತ ಮೊದಲು ಮುಖೇಶ್ ವಾಟ್ಸ್ಆ್ಯಪ್ನಲ್ಲಿ 'ಗುಡ್ಬೈ' ಎಂದು ಬರೆದುಕೊಂಡಿದ್ದ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ, ತದನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.
ಆತ್ಮಹತ್ಯೆಗೆ ಶರಣಾಗಿದ್ದ ಮುಖೇಶ್ ಹಾಗೂ ನೇಹಾ ಅಂತ್ಯಕ್ರಿಯೆ ನಡೆಸುವುದಕ್ಕೂ ಮೊದಲು ಇಬ್ಬರ ಮದುವೆ ಮಾಡಲಾಗಿದೆ. ಇಬ್ಬರು
ಪರಸ್ಪರ ಪ್ರೀತಿಸುತ್ತಿದ್ದ ಸಂದರ್ಭದಲ್ಲಿ ಮದುವೆ ಮಾಡಿಸದ ಕುಟುಂಬಸ್ಥರು
ಮೃತದೇಹಗಳಿಗೆ ಮದುವೆ ಮಾಡಿರುವುದು ಮಾತ್ರ ವಿಪರ್ಯಾಸ ಎಂದು ಸ್ಥಳೀಯರು ಮಾತನಾಡುತ್ತಿದ್ದಾರೆ.