![ಐಎಎಸ್ ಟಾಪರ್ಸ್ ದಂಪತಿ ವಿಚ್ಛೇದನವನ್ನು ಮಾನ್ಯ ಮಾಡಿದ ಜೈಪುರದ ಕೌಟುಂಬಿಕ ನ್ಯಾಯಾಲಯ ಐಎಎಸ್ ಟಾಪರ್ಸ್ ದಂಪತಿ ವಿಚ್ಛೇದನವನ್ನು ಮಾನ್ಯ ಮಾಡಿದ ಜೈಪುರದ ಕೌಟುಂಬಿಕ ನ್ಯಾಯಾಲಯ](https://blogger.googleusercontent.com/img/b/R29vZ2xl/AVvXsEgl-oMOPDmpn6cTUn1hO2eSt-Twru6ZJyS59Y58YQHEkONEDjC6lXnkfmIZW7CU29dXVctH2NCNu9hAq_QKsBsgiBSSBlorzwVtNfC8ZTaTcXYcUYYufz4BL72WunetebCSklbhNpXzlbc/s1600/1628697434946056-0.png)
ಐಎಎಸ್ ಟಾಪರ್ಸ್ ದಂಪತಿ ವಿಚ್ಛೇದನವನ್ನು ಮಾನ್ಯ ಮಾಡಿದ ಜೈಪುರದ ಕೌಟುಂಬಿಕ ನ್ಯಾಯಾಲಯ
Wednesday, August 11, 2021
ಜೈಪುರ: ಐಎಎಸ್ ಟಾಪರ್ಸ್ ಗಳಾದ ಟೀನಾ ಡಾಬಿ ಮತ್ತು ಅಥರ್ ಖಾನ್ ದಂಪತಿ ವಿಚ್ಛೇದನಕ್ಕಾಗಿ ಸಲ್ಲಿಸಿರುವ ಅರ್ಜಿಯನ್ನು ಜೈಪುರದ ಕೌಟುಂಬಿಕ ನ್ಯಾಯಾಲಯವು ಮಂಗಳವಾರ ಮಾನ್ಯ ಮಾಡಿ, ವಿಚ್ಛೇದನ ನೀಡಿದೆ.
2015ರ ಬ್ಯಾಚ್ನ ಐಎಎಸ್ ಎಕ್ಸಾಂನಲ್ಲಿ ಟೀನಾ ಡಾಬಿ ಟಾಪರ್ ಆಗಿದ್ದೂ, ಕಾಶ್ಮೀರ ಮೂಲದ ಅಥರ್ ಖಾನ್ ಎರಡನೇ ರ್ಯಾಂಕ್ ಪಡೆದಿದ್ದರು. ಇಬ್ಬರೂ ಒಂದೇ ಕಡೆಯಲ್ಲಿ ಐಎಎಸ್ ತರಬೇತಿ ಪಡೆಯುತ್ತಿರುವುದರಿಂದ ಇಬ್ಬರ ನಡುವೆಯೂ ಪ್ರೀತಿ ಬೆಳೆದಿತ್ತು. ಬಳಿಕ ಇಬ್ಬರು 2018ರಲ್ಲಿ ವಿವಾಹವಾಗಿದ್ದರು. ದಂಪತಿಗಳಿಬ್ಬರು ರಾಜಸ್ಥಾನ ಕೇಡರ್ನ ಅಧಿಕಾರಿಗಳಾಗಿದ್ದು, ಜೈಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದುವೆಯಾದ ಎರಡು ವರ್ಷಗಳ ಬಳಿಕ ಕಳೆದ ನವೆಂಬರ್ (2020) ತಿಂಗಳಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಇಬ್ಬರ ಮದುವೆಯೂ ಬಹಳ ಅದ್ಧೂರಿಯಾಗಿ ನಡೆದಿತ್ತು. ಅನೇಕ ಹಿರಿಯ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಆಶೀರ್ವದಿಸಿದ್ದರು. ಇವರಿಬ್ಬರ ಮದುವೆ ಭಾರೀ ಸುದ್ದಿ ಸಹ ಆಗಿತ್ತು. ಟೀನಾ ಡಾಬಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಮುಂದೆ ಖಾನ್ ಎಂಬ ಸರ್ನೇಮ್ ತೆಗೆದು ಹಾಕಿದಾಗಿನಿಂದ ಇಬ್ಬರ ನಡುವಿನ ವಿವಾಹ ಸಂಬಂಧ ಕುರಿತು ಸಾಕಷ್ಟು ಸುದ್ದಿಯಾಗಿತ್ತು. ಅದೇ ಸಮಯದಲ್ಲಿ ಅಥರ್ ಸಹ ಇನ್ಸ್ಟಾಗ್ರಾಂನಲ್ಲಿ ಟೀನಾ ಅವರನ್ನು ಅನ್ಫಾಲೋ ಮಾಡಿದ್ದರು. ಇದು ಇಬ್ಬರ ನಡುವೆ ಬಿರುಕು ಉಂಟಾಗಿದೆ ಎಂಬ ಮಾತಿಗೆ ಪುಷ್ಠಿ ನೀಡಿತ್ತು. ಟೀನಾ ಡಾಬಿ ಮತ್ತು ಅಥರ್ ಖಾನ್ ಮದುವೆಯೂ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ದಂಪತಿಗೆ ಶುಭಕೋರಿದರೆ, ಹಿಂದು ಮಹಾಸಭಾ, ಐಎಎಸ್ ಅಧಿಕಾರಿಗಳಿಬ್ಬರ ಮದುವೆಯನ್ನು ಲವ್ ಜಿಹಾದ್ ಎಂದು ಕರೆದಿತ್ತು.