ಕಸದ ತೊಟ್ಟಿಯಲ್ಲಿ ಬಿಸಾಡಿರುವ ವಸ್ತುಗಳನ್ನೇ ಮಾರಿ ವಾರಕ್ಕೆ 75 ಸಾವಿರ ರೂ. ಗಳಿಸುತ್ತಿರುವ ಮಹಿಳೆ
Tuesday, August 31, 2021
ನ್ಯೂಯಾರ್ಕ್: ಚಿಂದಿ ಆಯುವವರೆಂದರೆ ಎಲ್ಲರಿಗೂ ಒಂದು ರೀತಿಯ ತಾತ್ಸಾರ. ಆದರೆ ಇಲ್ಲೊಬ್ಬಳು ಕಸದ ತೊಟ್ಟಿಯಿಂದಲೇ ಪ್ರತಿ ತಿಂಗಳು ಲಕ್ಷ ರೂ. ಸಂಪಾದನೆ ಮಾಡುತ್ತಿದ್ದಾಳೆ ಎಂದರೆ ನಂಬಲೇಬೇಕು.
ಈ ಕಾರಣದಿಂದಲೇ ನ್ಯೂಯಾರ್ಕ್‌ನ 32 ವರ್ಷದ ಟಿಫಾನಿ ಶೆರಿ ಎಂಬ ನಾಲ್ಕು ಮಕ್ಕಳ ತಾಯಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದ್ದಾಳೆ. ಕ್ಯಾಂಟೀನ್ ಸರ್ವರ್ ಆಗಿದ್ದ ಈಕೆಗೆ ತನ್ನ ನಾಲ್ವರು ಮಕ್ಕಳ ಹೊಟ್ಟೆಯನ್ನು ಹೊರೆಯುವುದು ಭಾರಿ ಕಷ್ಟವಾಗಿತ್ತು. ಒಂದು ದಿನ ಆಕೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಸದ ಬುಟ್ಟಿ ಕಡೆ ಅವಳ ದೃಷ್ಟಿ ನೆಟ್ಟಿದೆ ಅಷ್ಟೇ… ಅದೇ ಆಕೆಯನ್ನು ಕೋಟ್ಯಧಿಪತಿಯನ್ನಾಗಿ ಮಾಡಿದೆ.
ಆ ಬಳಿಕ ಅವಳು ತನ್ನ ಪೂರ್ಣಾವಧಿ ಕೆಲಸ ತೊರೆದು ಡಂಪ್‌ಸ್ಟರ್ ಡೈವರ್ (ಕಸದ ರಾಶಿಯಲ್ಲಿ ಮೌಲ್ಯದ ವಸ್ತುಗಳನ್ನು ಹುಡುಕುವುದು) ಆಗಿದ್ದಾಳೆ. ಈಗ ವಾರಕ್ಕೆ $1000ಕ್ಕೂ (ಸುಮಾರು 73 ಸಾವಿರ ರೂಪಾಯಿ) ಹೆಚ್ಚು ಸಂಪಾದಿಸುತ್ತಿದ್ದಾಳೆ. ಈಕೆ ಕಸದ ಬುಟ್ಟಿಯಲ್ಲಿ ಬಿಸಾಡಿರುವ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾಳೆ. ಆ ವಸ್ತುಗಳನ್ನು ಸಂಗ್ರಹಿಸಿ ಅದನ್ನು ಶುಚಿಗೊಳಿಸಿ ನಂತರ ಅದಕ್ಕೊಂದು ರೂಪ ಕೊಟ್ಟು ಅದನ್ನು ಮಾರಾಟ ಮಾಡುತ್ತಿದ್ದಾಳೆ.
ಈ ಕಾರ್ಯಕ್ಕೆ ಮಹಿಳೆಯ ಪತಿ ಡೇನಿಯಲ್ ಕೂಡ ಸಾಥ್ ನೀಡಿದ್ದಾರೆ. ಇದೀಗ ತನ್ನ ಈ ಸಾಹಸಗಾಥೆಯನ್ನು ಶೆರಿ, ಟಿಕ್ ಟಾಕ್‌ನಲ್ಲಿ ಹಂಚಿಕೊಂಡಿದ್ದಾಳೆ. ಮಾತ್ರವಲ್ಲದೇ ‘ಡಂಪ್ ಸ್ಟರ್ ಡಿವಿಂಗ್ಮಾಮಾ’ ಹೆಸರಿನಲ್ಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಅದರಲ್ಲಿಯೂ ಸಾಹಸದ ಕಥನವನ್ನು ಹೇಳುತ್ತಾ ಇತರರಿಗೆ ಬದುಕುವ ದಾರಿ ತೋರುತ್ತಿದ್ದಾಳೆ.