19ರ ವಿವಾಹಿತ ಯುವತಿ - ಏಳು ಮಕ್ಕಳ ತಂದೆಯ ನಡುವೆ ಪ್ರೀತಿ: ಗಂಡ ಬೇಡ ವೃದ್ಧನೇ ಬೇಕು ಎಂದು ಪಟ್ಟು ಹಿಡಿದು ಕೋರ್ಟ್ ಮೊರೆ
Wednesday, August 11, 2021
ಹರಿಯಾಣ: ಹತ್ತೊಂಬತ್ತು ವರ್ಷದ ಯುವತಿಯು ಏಳು ಮಕ್ಕಳ ತಂದೆ, ಹಲವಾರು ಮೊಮ್ಮಕ್ಕಳಿರುವ 67 ವರ್ಷದ ವೃದ್ಧನೊಂದಿಗೆ ಓಡಿಹೋಗಿ ವಿವಾಹವಾಗಿರುವ ಘಟನೆ ಪಂಜಾಬ್- ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ್ದು, ಖುದ್ದು ನ್ಯಾಯಮೂರ್ತಿಗಳೇ ಇವರ ಈ ಪ್ರೀತಿಯ ಬಗ್ಗೆ ಅಚ್ಚರಿ ಪಟ್ಟುಕೊಂಡಿದ್ದಾರೆ.
ಭೂವಿವಾದಕ್ಕೆ ಸಂಬಂಧಿಸಿದಂತೆ ಇರುವ ತಗಾದೆಯೊಂದರಲ್ಲಿ ಪರಸ್ಪರ ಭೇಟಿಯಾಗಿರುವ ಇಬ್ಬರ ನಡುವೆ ಅದು ಹೇಗೋ ಪ್ರೀತಿ ಹುಟ್ಟಿದೆ. ಯುವತಿಗೂ ಈಗಾಗಲೇ ಮದುವೆಯಾಗಿದ್ದು, ಗಂಡನನ್ನು ಬಿಟ್ಟು ವೃದ್ಧನನ್ನು ಮದುವೆಯಾಗಿದ್ದಾಳೆ. ಏಳು ಮಕ್ಕಳ ತಂದೆಯಾಗಿರುವ ವೃದ್ಧನ ಪತ್ನಿ ಮೃತಪಟ್ಟಿದ್ದಾಳೆ. ಆತನ ಏಳು ಮಕ್ಕಳಿಗೂ ಮದುವೆಯಾಗಿದ್ದು, ಹಲವಾರು ಮೊಮ್ಮಕ್ಕಳೂ ಇದ್ದಾರೆ.
ಇದೀಗ ಯುವತಿಯ ಪಾಲಕರು ಕೇಸ್ ಹಾಕಿದ್ದು, ಆದ್ದರಿಂದ ಈ ಜೋಡಿ ಪಂಜಾಬ್- ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಯುವತಿಗೆ ಕುಟುಂಬಸ್ಥರಿಂದ ಜೀವ ಬೆದರಿಕೆ ಇರುವುದಾಗಿ ಅರ್ಜಿಯಲ್ಲಿ ಹೇಳಲಾಗಿದ್ದು, ಪಾಲಕರಿಂದ ರಕ್ಷಣೆ ಕೋರಿದ್ದಾಳೆ. ಅರ್ಜಿಯನ್ನು ನೋಡಿ, ವಿಷಯ ತಿಳಿದುಕೊಂಡ ನ್ಯಾಯಮೂರ್ತಿಗಳೇ ಅಚ್ಚರಿ ಪಟ್ಟುಕೊಂಡಿದ್ದು, ಈ ಮದುವೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ. ಅವರಿಗೆ ಯಾವುದೇ ಹಾನಿ ಮಾಡಬಾರದು ಎಂದು ಕುಟುಂಬಸ್ಥರಿಗೆ ಕೋರ್ಟ್ ಸೂಚಿಸಿದ್ದರೂ, ಈ ಮದುವೆಯಾಗಿದ್ದು ಹೇಗೆ, ಯಾವ ಸಂದರ್ಭದಲ್ಲಿ ಎಂಬ ಬಗ್ಗೆ ತನಿಖೆ ಮಾಡುವಂತೆ ಪೊಲೀಸರಿಗೆ ಕೋರ್ಟ್ ನಿರ್ದೇಶಿಸಿದೆ.
ವಿಷಯದ ಗಂಭೀರತೆಯನ್ನು ಗಮನಿಸಿರುವ ಕೋರ್ಟ್, ಮಹಿಳಾ ಪೊಲೀಸರನ್ನು ಒಳಗೊಂಡ ತಂಡವನ್ನು ರಚಿಸುವಂತೆ ಪೊಲೀಸ್ ಅಧಿಕಾರಿಗೆ ಆದೇಶಿಸಿದೆ. ಹುಡುಗಿಗೆ ಭದ್ರತೆಯನ್ನು ಒದಗಿಸಬೇಕು. ಅಲ್ಲಿಯವರೆಗೆ ಈ ಮದುವೆಯ ಕುರಿತು ತನಿಖೆ ನಡೆಸಬೇಕು. ಈ ವ್ಯಕ್ತಿಯ ಇತಿಹಾಸವನ್ನು ಪರಿಶೀಲನೆ ಮಾಡಬೇಕು. ಈ ಬಗ್ಗೆ ಒಂದು ವಾರದೊಳಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.