
ಪ್ರಿಯಕರನೊಂದಿಗೆ ಓಡಿಹೋದ ಆಕೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿದ ಗಂಡ... ಇದೆಂತಹ ಕ್ರೂರ ಶಿಕ್ಷೆ...!!
Saturday, July 17, 2021
ಅಹಮದಾಬಾದ್: ವಿವಾಹಿತೆಯೊಬ್ಬಳು ತನ್ನ ಪ್ರಿಯಕರನ ಜತೆ ಓಡಿಹೋಗಿದ್ದ ಕಾರಣಕ್ಕೆ ಆಕೆಯ ಗಂಡನೇ ಅತ್ಯಂತ ಕ್ರೂರ ಶಿಕ್ಷೆಯನ್ನು ನೀಡಿರುವ ಘಟನೆ ಗುಜರಾತ್ನ ದಹೋಡ್ ಜಿಲ್ಲೆಯಲ್ಲಿ ನಡೆದಿದೆ.
ಯುವತಿ ಗಂಡ ಗ್ರಾಮದ ಹಿರಿಯರೊಂದಿಗೆ ಸೇರಿ ಆಕೆಯನ್ನು ವಿವಸ್ತ್ರಳನ್ನಾಗಿ ಮಾಡಿ ಮೆರವಣಿಗೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಈ ಘಟನೆಗೆ ವಿಡಿಯೋ ಕೂಡ ಮಾಡಲಾಗಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಈ ಬಗ್ಗೆ ಕೇಸ್ ದಾಖಲಿಸಿಕೊಂಡಿದ್ದಾರೆ. 23 ವರ್ಷದ ವಿವಾಹಿತೆ ಕಳೆದ ತಿಂಗಳು ಪ್ರಿಯಕರನೊಂದಿಗೆ ಓಡಿಹೋಗಿದ್ದಳು. ನಂತರ ಇವಳನ್ನು ಇವಳ ಗಂಡ ಹಾಗೂ ಗ್ರಾಮಸ್ಥರು ಹಲವೆಡೆ ಹುಡುಕಾಡಿ ಪತ್ತೆಹಚ್ಚಿದ್ದರು. ಅವರನ್ನು ಕರೆತಂದು ಪಂಚಾಯಿತಿ ನಡೆಸಿದ್ದರು. ಮದುವೆಯಾದ ಬಳಿಕ ಮತ್ತೋರ್ವನೊಂದಿಗೆ ಹೋಗಿದ್ದಕ್ಕೆ ಶಿಕ್ಷೆಯಾಗಿ ತನ್ನ ಗಂಡ ಹಾಗೂ ಕುಟುಂಬಸ್ಥರು ಸೇರಿ ಆಕೆಯನ್ನು ಹೊಡೆದು ವಿವಸ್ತ್ರಳನ್ನಾಗಿಸಿ ಮೆರವಣಿಗೆ ಮಾಡಿದ್ದಾರೆ. ಈ ಬಗ್ಗೆ ಸಂತ್ರಸ್ತೆಯ ಗಂಡ ಸೇರಿದಂತೆ 18 ಮಂದಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.