
ಮೀರಾಗೆ ಅದೃಷ್ಟ ತಂದ ಕಿವಿಯೋಲೆ ಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಫಿದಾ...!!
ನವದೆಹಲಿ: ಮೀರಾಗೆ ಅದೃಷ್ಟ ತರಲೆಂದು ಅವರ ಅಮ್ಮ ತಮ್ಮ ಆಭರಣವನ್ನು ಮಾರಿ ಈ ವಿಶಿಷ್ಟ ಕಿವಿಯೋಲೆಯನ್ನು ಉಡುಗೊರೆ ನೀಡಿದ್ದರು. ಶನಿವಾರ ಮೀರಾ ಈ ಕಿವಿಯೋಲೆ ಧರಿಸಿಯೇ ಸ್ಪರ್ಧಿಸಿದ್ದರು. ಅದರಿಂದಲೇ ಅವರಿಗೆ ಪದಕದ ಅದೃಷ್ಟ ಒಲಿಯಿತು ಎನ್ನಲಾಗುತ್ತಿದೆ.
ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೂಡ ಮೀರಾಬಾಯಿ ಅವರ ಕಿವಿಯೋಲೆಗೆ ಫಿದಾ ಆಗಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮೀರಾ ಸಾಧನೆಯನ್ನು ಶ್ಲಾಘೀಸುತ್ತ ಅನುಷ್ಕಾ ಶರ್ಮ, ಅವರ ಕಿವಿಯೋಲೆಯನ್ನು ವಿಶೇಷವಾಗಿ ಮೆಚ್ಚುತ್ತ ‘ಇದು ಸುಂದರವಾಗಿದೆ’ ಎಂದು ಹೃದಯದ ಇಮೋಜಿ ಹಾಕಿಕೊಂಡಿದ್ದರು.
ಮೀರಾ, ತಮ್ಮ ನೆಚ್ಚಿನ ಪಿಜ್ಜಾದಿಂದ ದೂರ ಉಳಿದು ಫಿಟ್ನೆಸ್‌ಗಾಗಿ ಕಠಿಣ ಪರಿಶ್ರಮಪಟ್ಟಿದ್ದರು. ಹೀಗಾಗಿ ಪದಕ ಗೆಲುವಿನ ಬಳಿಕ ಮೊದಲನೆಯದಾಗಿ ಪಿಜ್ಜಾ ತಿನ್ನುವುದಾಗಿ ಮೀರಾ ಶನಿವಾರ ಹೇಳಿಕೊಂಡಿದ್ದರು. ಮೀರಾ ಅವರ ಈ ಹೇಳಿಕೆಗೆ ಪ್ರತಿಯಾಗಿ ಡಾಮಿನೋಸ್ ಇಂಡಿಯಾ ಪಿಜ್ಜಾ ಕಂಪನಿ, ‘ಮೀರಾ ಹೇಳಿದ್ದು ನಮಗೆ ಕೇಳಿಸಿದೆ. ಪಿಜ್ಜಾ ತಿನ್ನಲು ಮೀರಾ ಮುಂದೆಂದೂ ಕಾಯಬೇಕಾಗಿಲ್ಲ. ನಾವಿನ್ನು ಅವರಿಗೆ ಜೀವನವಿಡೀ ಉಚಿತವಾಗಿ ಪಿಜ್ಜಾ ಪೂರೈಸುತ್ತೇವೆ’ ಎಂದು ಟ್ವೀಟಿಸಿದೆ.