ಒಂದೇ ದಿನಕ್ಕೆ ಲಕ್ಷಕ್ಕೂ ಅಧಿಕ ಬುಕ್ಕಿಂಗ್ ಆದ ಓಲಾ ಎಲೆಕ್ಟ್ರಿಕಲ್ ಸ್ಕೂಟರ್...!!
Sunday, July 18, 2021
ನವದೆಹಲಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭವಾಗಿದ್ದು, 499 ರೂಪಾಯಿಗೆ ಮುಂಗಡ ಬುಕ್ಕಿಂಗ್ ಆರಂಭಿಸಲಾಗಿದ್ದು, ಇದು ಹೊಸದೊಂದು ದಾಖಲೆಯನ್ನೇ ಬರೆದಿದೆ.
ಓಲಾ ಸಂಸ್ಥೆಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ಗಳ ಬುಕ್ಕಿಂಗನ್ನು ಜುಲೈ 15ರಂದು ಆರಂಭಿಸಿತ್ತು. ಬುಕ್ಕಿಂಗ್ ಆರಂಭವಾದ ಬರೀ 24 ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಸ್ಕೂಟರ್ ಬುಕ್ ಆಗಿದೆಯಂತೆ. ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಇತಿಹಾಸದಲ್ಲಿ ಇದೇ ಗರಿಷ್ಠ ಎಂದು ಹೇಳಲಾಗಿದೆ. ಅದರಲ್ಲೂ ಸ್ಕೂಟರ್ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಕೊಡದಿದ್ದರೂ ಜನರು ಸ್ಕೂಟರ್ಗಾಗಿ ಬುಕ್ಕಿಂಗ್ ಮಾಡಿದ್ದು, ಸಂಸ್ಥೆಯ ಸಂತೋಷಕ್ಕೆ ಕಾರಣವಾಗಿದೆ.
ಈ ಬಗ್ಗೆ ಓಲಾ ಸಂಸ್ಥೆಯ ಅಧ್ಯಕ್ಷ ಮತ್ತು ಸಮೂಹ ಸಿಇಒ ಭಾವೀಶ್ ಅಗರ್‌ವಾಲ್ ಮಾತನಾಡಿದ್ದಾರೆ.ಅವರು, “ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಕ್ಕಾಗಿ ಭಾರತದಾದ್ಯಂತ ಗ್ರಾಹಕರ ಅದ್ಭುತ ಪ್ರತಿಕ್ರಿಯೆಯಿಂದ ನಾನು ರೋಮಾಂಚನಗೊಂಡಿದ್ದೇನೆ. ಇದು ಗ್ರಾಹಕರ ಆದ್ಯತೆಗಳನ್ನು ಇವಿಗಳಿಗೆ ವರ್ಗಾಯಿಸುವ ಸ್ಪಷ್ಟ ಸೂಚಕವಾಗಿದೆ. ಇದು ನಮ್ಮ ಒಂದು ದೊಡ್ಡ ಹೆಜ್ಜೆಯಾಗಿದೆ. ಓಲಾ ಸ್ಕೂಟರ್ ಅನ್ನು ಕಾಯ್ದಿರಿಸಿದ ಮತ್ತು ಇವಿ ಕ್ರಾಂತಿಯಲ್ಲಿ ಸೇರಿಕೊಂಡ ಎಲ್ಲ ಗ್ರಾಹಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ಪ್ರಾರಂಭ ಮಾತ್ರ!” ಎಂದು ಹೇಳಿದ್ದಾರೆ.