ಪ್ರೇಮ ನಿವೇದನೆ ತಿರಸ್ಕಾರ: ಯುವತಿಗೆ ಕತ್ತಿಯಿಂದ ಇರಿದು ಹಲ್ಲೆ...ಆತ ನೇಣಿಗೆ ಶರಣು...
Thursday, July 1, 2021
ಚುರು (ರಾಜಸ್ಥಾನ): ತಾನು ಪ್ರೀತಿಸುತ್ತಿದ್ದ ಯುವತಿಗೆ ವಿವಾಹ ನಿಶ್ಚಯವಾಗಿದೆ ಎಂದು ತಿಳಿದ ಯುವಕ ಆಕೆ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ.
ಚುರು ಜಿಲ್ಲೆಯ ಕುನ್ಸಿಸಾರ್ ಗ್ರಾಮದ ಯುವತಿಯನ್ನು ಜಗದೀಶ್ ಸಿಂಗ್ ರಾಥೋಡ್ ಎಂಬಾತ ಪ್ರೀತಿಸುತ್ತಿದ್ದ. ಆದರೆ, ಇವನ ಪ್ರೇಮ ನಿವೇದನೆಯನ್ನು ಯುವತಿ ತಿರಸ್ಕರಿಸಿದ್ದಳು. ಯುವತಿ ಹಾಗೂ ಆಕೆಯ ಸಹೋದರಿ ಇಬ್ಬರಿಗೂ ಜುಲೈ 18 ರಂದು ಮದುವೆ ಫಿಕ್ಸ್ ಆಗಿದ್ದು, ಸ್ನೇಹಿತರೊಬ್ಬರ ಮನೆಗೆ ತೆರಳಿ ವಿವಾಹಕ್ಕೆ ಆಮಂತ್ರಣ ನೀಡಿ ಬರುವ ವೇಳೆ ಬೈಕ್ನಲ್ಲಿ ಬಂದ ಜಗದೀಶ್ ಸಿಂಗ್ ರಾಥೋಡ್ ಇವರನ್ನು ಅಡ್ಡಗಟ್ಟಿದ್ದಾನೆ. ಯುವತಿ ಮೇಲೆ ನಿರ್ದಯವಾಗಿ ಹಲವಾರು ಬಾರಿ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ.ಯುವತಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಆರೋಪಿಯು ಅಲ್ಲೇ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಪ್ರಾಣಬಿಟ್ಟಿದ್ದನು.