Mangaluru ನಿಂಬೆಹಣ್ಣು ನಡುವೆ ದೊರಕಿತು ಬರೋಬ್ಬರಿ 40ಕೆಜಿ ಗಾಂಜಾ: ಇಬ್ಬರು ಅಂದರ್
Saturday, July 3, 2021
ಮಂಗಳೂರು: ಪಿಕ್ ಅಪ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ನಿಂಬೆಹಣ್ಣುಗಳ ನಡುವೆ ಇದ್ದ ಬರೋಬ್ಬರಿ 40ಕೆಜಿ ಗಾಂಜಾವನ್ನು ಪತ್ತೆಹಚ್ಚಿರುವ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ಕಂಬಲ್ಲೂರು ನಿವಾಸಿ ಶಿಹಾಬುದ್ದೀನ್ ವಿ.ವಿ.(32), ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್, ಕಾಡುಮೆನಿ ನಿವಾಸಿ ಲತೀಫ್(38) ಬಂಧಿತ ಆರೋಪಿಗಳು.
ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಉರ್ವ ಪೊಲೀಸ್ ಠಾಣೆಯ ನಿರೀಕ್ಷಕ ಜೋತಿರ್ಲಿಂಗ ಹೊನಕಟ್ಟಿ ಹಾಗೂ ತಂಡ ನಗರದ ಕೊಟ್ಟಾರ ಚೌಕಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ನಿಂಬೆಹಣ್ಣು ಸಾಗಾಟ ಮಾಡುತ್ತಿದ್ದ ಬೊಲೆರೋ ಪಿಕ್ ಅಪ್ ವಾಹನವೊಂದು ಆಗಮಿಸಿದೆ. ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ವಾಹನದಲ್ಲಿ 20 ಪ್ಯಾಕೇಟ್ ಗಳ 40ಕೆಜಿ ಗಾಂಜಾ ಪತ್ತೆಯಾಗಿದೆ.
ತಕ್ಷಣ ಆರೋಪಿಗಳಿಬ್ಬರನ್ನು ಬಂಧಿಸಿರುವ ಪೊಲೀಸರು 40 ಕೆಜಿ ಗಾಂಜಾ, ಪಿಕ್ ಅಪ್ ವಾಹನ ಹಾಗೂ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಮೌಲ್ಯ 11.17 ಲಕ್ಷ ರೂ. ಅಂದಾಜಿಸಲಾಗಿದೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.