
ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮಗಳಿಗಾಗಿ ಅಪ್ಪನಿಂದ ನೂತನ ಇಲೆಕ್ಟ್ರಿಕ್ ಸೈಕಲ್ ಆವಿಷ್ಕಾರ
ತ್ರಿಪುರಾ: ತ್ರಿಪುರಾದ ಅಗರ್ತಾಳದಲ್ಲಿನ ಪಾರ್ಥ ಸಹಾ ಎಂಬಾತ ನೂತನ ಆವಿಷ್ಕಾರವೊಂದನ್ನು ಮಾಡಿದ್ದಾರೆ. ಇದು ಜಾಲ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನೆಟ್ಟಿಗರು ಇದಕ್ಕೆ ಫಿದಾ ಆಗಿದ್ದಾರಂತೆ. ಹಾಗಾದರೆ ಆತ ಮಾಡಿರುವುದಾದರೂ ಏನು ಗೊತ್ತಾ...?
ಕೊರೊನಾ ಸಂಕಷ್ಟ ಎದುರಾದ ಬಳಿಕ ಸಾಮಾಜಿಕ ಅಂತರ ಪಾಲಿಸೋದು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚಾರ ನಡೆಸೋದು ಬಹಳ ದುಸ್ತರವಾಗಿದೆ. ವಾಹನಗಳಿದ್ದರೂ ಕೂಡಾ ಸಾಮಾಜಿಕ ಅಂತರದಿಂದ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ.
ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಪಾರ್ಥ ಸಹಾ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಪ್ರಯಾಣಿಸಬಹುದಾದ ಇಲೆಕ್ಟ್ರಿಕ್ ಮೋಟಾರ್ ಸೈಕಲೊಂದನ್ನು ಆವಿಷ್ಕಸಿದ್ದಾರೆ. ಈ ಇಲೆಕ್ಟ್ರಿಕ್ ಮೋಟಾರ್ ಸೈಕಲ್‌ನಿಂದ ಪ್ರಯಾಣಿಕರು ಲಾಕ್‌ಡೌನ್‌ನಲ್ಲೂ ಕೂಡ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೊರೊನಾ ಭಯವನ್ನು ಬಿಟ್ಟು ಓಡಾಡಬಹುದು ಯಾಕೆಂದರೆ ಈ ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬಹುದಾಗಿದೆ.
ಈ ಇಲೆಕ್ಟ್ರಿಕ್ ಮೋಟಾರ್ ಸೈಕಲ್‌ನ್ನು ನಿರ್ಮಿಸಿದ ಪಾರ್ಥ ಸಹಾ ಶ್ರೀಮಂತರಲ. ಇವರೊಬ್ಬರು ಟಿವಿ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುವ ಬಡ ವ್ಯಕ್ತಿ. ಇವರು ಈ ಮೂಲಕ ಹಣ ಸಂಪಾದಿಸುವ, ಬಾಡಿಗೆ ಪಡೆಯುವ ಅಥವಾ ಜನಪ್ರಿಯತೆಯನ್ನು ಗಳಿಸುವ ಉದ್ದೇಶದಿಂದಾಗಲಿ ಇವರು ಈ ಮೋಟಾರ್ ಸೈಕಲ್‌ನ್ನು ನಿರ್ಮಿಸಿಲ್ಲ, ಬದಲಾಗಿ ತನ್ನ ಪ್ರೀತಿಯ ಮಗಳ ಸುರಕ್ಷತೆಗಾಗಿ ಈ ಮೋಟಾರ್ ಸೈಕಲ್‌ನ್ನು ನಿರ್ಮಿಸಿದ್ದಾರಂತೆ.
ಲಾಕ್‌ಡೌನ್ ಮುಗಿದ ಬಳಿಕ ಹೆಚ್ಚು ಮಕ್ಕಳು ಪ್ರಯಾಣಿಸುವ ಶಾಲಾ ವಾಹನದಲ್ಲೇ ಪ್ರಯಾಣಿಸುವುದು ಸಹಾರಿಗೆ ಇಷ್ಟವಿರಲಿಲ್ಲ. ಯಾಕೆಂದರೆ ಶಾಲಾ ವಾಹನದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಸಾಧ್ಯವಿಲ್ಲ ಇದರಿಂದ ಕೊರೋನಾ ಹರಡಬಹುದೆನ್ನುವ ಉದ್ದೇಶದಿಂದ ಇವರು ತನ್ನ ಮಗಳಿಗಾಗಿ ಈ ಇಲೆಕ್ಟ್ರಿಕ್ ಮೋಟಾರ್ ಸೈಕಲ್‌ನ್ನು ತಯಾರಿಸಿದ್ದಾರೆ. ಪಾರ್ಥ ಸಹಾ ರವರು ಗುಜರಿ ವ್ಯಾಪಾರಿಗಳಿಂದ ಕಡಿಮೆ ಬೆಲೆಗೆ ಹಳೆಯ ಮೋಟಾರ್ ಸೈಕಲೊಂದನ್ನು ಖರೀದಿಸಿ, ಅದರಲ್ಲಿನ ಇಂಜಿನ್‌ನ್ನು ಸಂಪೂರ್ಣವಾಗಿ ತೆಗೆದುಹಾಕಿ, ನಂತರ ಬೈಕ್‌ನ ಮುಂದಿನ ಚಕ್ರಕ್ಕೆ ಮತ್ತು ಹಿಂದಿನ ಚಕ್ರಕ್ಕಿರುವ ಬೆಸುಗೆಯನ್ನು ಕತ್ತರಿಸಿ ತೆಗೆದುಹಾಕಿ ಮುಂದಿನ ಮತ್ತು ಹಿಂದಿನ ಚಕ್ರಗಳ ನಡುವೆ 3.2 ಅಡಿ ಉದ್ದದ ಲೋಹದ ರಾಡ್‌ನ್ನು ಅಳವಡಿಸುವ ಮುಖಾಂತರ ಬೈಕ್‌ನ ಉದ್ದವನ್ನು ಹೆಚ್ಚಿಸಿದ್ದಾರೆ. ಇದರಿಂದ ಸರ್ಕಾರ ನೀಡಿರುವ ಸಾಮಾಜಿಕ ಅಂತರದ ಆಜ್ಞೆಯನ್ನು ಕಾಪಾಡಿಕೊಳ್ಳಬಹುದಾಗಿದೆ.
ಈ ಮೋಟಾರ್ ಸೈಕಲ್‌ನಲ್ಲಿ ಅಳವಡಿಸಲಾಗಿದ್ದ ಹಳೆಯ ಇಂಜಿನ್‌ನ್ನು ತೆಗೆದುಹಾಕಿ ಎಲೆಕ್ಟ್ರಿಕ್ ಇಂಜಿನ್ ಅಳವಡಿಸಲಾಗಿದೆ. ಇದರಲ್ಲಿನ ಇಲೆಕ್ಟ್ರಿಕ್ ಬ್ಯಾಟರಿಯನ್ನು ಸುಮಾರು 3 ಗಂಟೆಗಳೊಳಗೆ ಸಂಪೂರ್ಣ ಚಾರ್ಜ್ ಮಾಡಬಹುದಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ 80 ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸಬಹುದಾಗಿದೆ. ಈ ಇಲೆಕ್ಟ್ರಿಕ್ ಮೋಟಾರ್ ಸೈಕಲ್‌ನಿಂದ ನಾವು ಪ್ರಯಾಣದಲ್ಲೂ ಕೂಡ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬಹುದಾಗಿದೆ.