ಕಪ್ಪುಹಣ ಬಿಳಿಯಾಗಿಸುವ ಆಮಿಷಕ್ಕೆ ಬಲಿಯಾದ ವ್ಯಕ್ತಿ: 9.20 ಲಕ್ಷ ರೂ. ಪಂಗನಾಮ Mangalore
Friday, July 30, 2021
ಮಂಗಳೂರು: ಕಪ್ಪುಹಣವನ್ನು ಬಿಳಿ ಮಾಡುವ ಆಮಿಷಕ್ಕೆ ಬಲಿಯಾಗಿ ವ್ಯಕ್ತಿಯೋರ್ವರು 9.20 ಲಕ್ಷ ರೂ. ಕಳೆದುಕೊಂಡ ಬಗ್ಗೆ ಮಂಗಳೂರಿನ ಕಾವೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಿಡಬ್ಲ್ಯೂಡಿ ಕಾಂಟ್ರ್ಯಾಕ್ಟರ್ ಆಗಿರುವ ರೋಹಿದಾಸ್ ಎಂಬವರು, ಮನೆ ಕಟ್ಟಿ ಮಾರಾಟ ಮಾಡುತ್ತಿದ್ದರು. ಇದೇ ಉದ್ದೇಶದಿಂದ ದಿನ ಪತ್ರಿಕೆಯೊಂದರಲ್ಲಿ ಮನೆ ಮಾರಾಟದ ಬಗ್ಗೆ ಜಾಹೀರಾತು ನೀಡಿದ್ದರು. ಇದಾಗಿ ಒಂದು ವಾರದಲ್ಲಿ 7829894477 ನಂಬರ್ ನಿಂದ ನಿತಿನ್ ರಾಜ್ ಬೆಂಗಳೂರು ಮತ್ತು ಧನರಾಜ್ ವಿಟ್ಲ ಎಂಬವರು ಕರೆ ಮಾಡಿ, ತಾವು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದು ನಮ್ಮ ಸಂಸ್ಥೆಯ ಮಾಲಕರಿಗೆ ಮಂಗಳೂರಿನಲ್ಲಿ ಮನೆ ಬೇಕು ಎಂದು ತಿಳಿಸಿದ್ದಾರೆ.
ಅವರ ಮನೆಗೆ 50 ಲಕ್ಷ ರೂ. ಸಾಲ ತೆಗೆಸಿಕೊಡುವುದಾಗಿಯೂ ಹೇಳಿದ, ಧನರಾಜ್ ವಿಟ್ಲ ಎಂಬಾತ ರೋಹಿದಾಸ್ ರನ್ನು ಶ್ರೀರಂಗಪಟ್ಟಣಕ್ಕೆ ಬರಲು ಹೇಳಿದ್ದಾನದ. ಈ ಸಂದರ್ಭ ನಿತಿನ್ ರಾಜ್ ಸಾಲದ ರೂಪವಾಗಿ 1.50 ಕೋಟಿ ರೂ. ಕಪ್ಪುಹಣವನ್ನು ನೀಡಿ, ಅದನ್ನು ಬಿಳಿ ಮಾಡಲು ತಿಳಿಸಿದ್ದಾರೆ. ಈ ಕಪ್ಪುಬಣ್ಣದ ಕಾಗದವನ್ನು ಲಿಕ್ವಿಡ್ ನಂತೆ ತೋರುವ ನೀರಿಗೆ ಮುಳುಗಿಸಿ ತೆಗೆದಾಗ ಕಪ್ಪುಬಣ್ಣದ ಕಾಗದ 500 ರೂ. ನೋಟಿನ ರೂಪ ತಾಳಿದೆ. ಇದೇ ರೀತಿ ಮಾಡುವಂತೆ ಹೇಳಿ 1.5 ಕೋಟಿ ರೂ.ವನ್ನು ರೋಹಿದಾಸ್ ಗೆ ನೀಡಿದ್ದಾರೆ.
ಇದನ್ನು ನಂಬಿದ ರೋಹಿದಾಸ್ ಹಣದ ಬ್ಯಾಗ್ ಹಾಗೂ ಲಿಕ್ವಿಡ್ ತುಂಬಿರು ಕ್ಯಾನನ್ನು ವಿಟ್ಲದ ಧನರಾಜ್ ಕಾರಿನ ಢಿಕ್ಕಿಯಲ್ಲಿರಿಸಿ ಹೊರಟು ಬಂದಿದ್ದಾರೆ. ಆದರೆ ಒಂದು ಕಿಲೋ ಮೀ. ಮುಂದೆ ಬಂದಾಗ ಕಾರಿನಲ್ಲಿ ಯಾವುದೋ ಶಬ್ದ ಬಂದಂತೆ ಕೇಳಿದ್ದು, ಧನರಾಜ್ ಕಾರು ನಿಲ್ಲಿಸಿ ಡಿಕ್ಕಿ ತೆರೆದು ನೋಡುವಾಗ ಲಿಕ್ವಿಡ್ ಕ್ಯಾನ್ ಕೆಳಗೆ ಬಿದ್ದು, ಎಲ್ಲವೂ ಚೆಲ್ಲಿದೆ. ತಕ್ಷಣ ಈ ಬಗ್ಗೆ ನಿತಿನ್ ರಾಜ್ ಗೆ ಕರೆಮಾಡಿ ನಡೆದ ವಿಷಯವನ್ನು ತಿಳಿಸಿದ್ದಾರೆ. ಸ್ವಲ್ಪ ಸಮಯದಲ್ಲಿ ಆತ ಅಲ್ಲಿಗೆ ಬಂದು ಲಿಕ್ವಿಡ್ ಚೆಲ್ಲಿರುವುದಕ್ಕೆ ಬೈಯ್ದು, 'ಈ ಲಿಕ್ವಿಡ್ 25 ಲಕ್ಷ ರೂ. ಬೆಳೆಬಾಳುತ್ತಿದ್ದು, ಬೇಜಾಬ್ದಾರಿಯಿಂದ ಚೆಲ್ಲಿದ್ದೀರಿ. ಇನ್ನು ಇದು ಸಿಗುವುದು ಕಷ್ಟ' ಎಂದು ಹೇಳಿದ್ದಾನೆ. ಅಲ್ಲದೆ ಯಾರೋ ಹುಡುಗಿಗೆ ಕರೆ ಮಾಡಿ ರೋಹಿದಾಸ್ ರೊಂದಿಗೆ ಮಾತನಾಡಲು ತಿಳಿಸಿದ್ದಾನೆ. ಆಕೆ ಬೇರೆ ಲಿಕ್ವಿಡ್ ಬೇಕಾದಲ್ಲಿ 25 ಲಕ್ಷ ರೂ. ನೀಡಬೇಕು ಎಂದಿದ್ದಾಳೆ. ಬಳಿಕ ನಿತಿನ್ ರಾಜ್ 'ತಾನು 10 ಲಕ್ಷ ರೂ. ರೆಡಿ ಮಾಡುತ್ತೇನೆ. ನೀವಿಬ್ಬರೂ ಸೇರಿ 15 ಲಕ್ಷ ರೂ. ರೆಡಿ ಮಾಡಿ ಕೂಡಲೇ ನೀಡಬೇಕು' ಎಂದು ತಿಳಿಸಿದ್ದಾನೆ. ಬಳಿಕ ಕಾರಿನಲ್ಲಿರುವ ಕಪ್ಪುಬಣ್ಣದ ಕಾಗದದ ಬ್ಯಾಗನ್ನು ಆತನ ಕಾರಿನಲ್ಲಿ ಇರಿಸಿ ನೀವು ಕೂಡಲೇ ಊರಿಗೆ ಹೋಗಿ 15 ಲಕ್ಷ ರೂ. ಹಣದ ವ್ಯವಸ್ಥೆ ಮಾಡಿದರೆ ಲಿಕ್ವಿಡ್ ತರಿಸುವುದಾಗಿ ತಿಳಿಸಿದ್ದಾನೆ.
ಮರುದಿವಸ ವಿಟ್ಲದ ಧನರಾಜ್ ಕರೆ ಮಾಡಿ ತಾನು ಹೇಗಾದರೂ ಮಾಡಿ 7 ಲಕ್ಷ ರೂ. ಹಣ ರೆಡಿ ಮಾಡುತ್ತೇನೆ. ತಾವು ಕೂಡಾ ಏನಾದರೂ ಮಾಡಿ ಎಂದಿದ್ದಾನೆ. ಈ ಬಗ್ಗೆ ಆತ ಪದೇ ಪದೇ ಪೋನ್ ಮಾಡುತ್ತಿದ್ದನು. ಆದ್ದರಿಂದ ರೋಹಿದಾಸ್ ಹೆಂಡತಿ- ಮಕ್ಕಳ ಒಡವೆಗಳನ್ನು 7.20 ರೂ.ಗೆ ಅಡವಿಟ್ಟು ಅದಕ್ಕೆ ತನ್ನಲ್ಲಿದ್ದ 2 ಲಕ್ಷ ರೂ.ವನ್ನೂ ಇರಿಸಿ ಒಟ್ಟು 9.20 ಲಕ್ಷ ರೂ. ನೀಡಿದ್ದಾರೆ. ಆದರೆ ಆ ಬಳಿಕ ಅವರು ಲಿಕ್ವಿಡ್, ಕಪ್ಪುಹಣ ನೀಡದೆ ವಂಚಿಸಿರುವುದಾಗಿ ರೋಹಿದಾಸ್ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.