ಲಾಟರಿ ಯಲ್ಲಿ ಆಯ್ಕೆಯಾಗಿದ್ದೀರಿ.. ಕಡಿಮೆ ಬೆಲೆಗೆ ಮೊಬೈಲ್ ಕೊಡ್ತೇವೆ ಎಂದು ನಂಬಿಸಿದವರು...
Saturday, July 10, 2021
ನವದೆಹಲಿ: ದೂರವಾಣಿ ಕರೆ ಮಾಡಿ ಲಾಟರಿ ಸ್ಕೀಮ್ ಮೂಲಕ ಮೊಬೈಲ್ ಫೋನ್ ಗಳನ್ನು ಅಗ್ಗದ ಬೆಲೆಯಲ್ಲಿ ನೀಡುವುದಾಗಿ ಹಣ ಪಡೆದು ಜನರನ್ನು ವಂಚಿಸುತ್ತಿದ್ದ ಖದೀಮರನ್ನು ದೆಹಲಿ ಪೊಲೀಸ್ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಹಿಳೆಯರು ಸೇರಿದಂತೆ 24 ಜನರನ್ನು ಬಂಧಿಸಿರುವ ಪೊಲೀಸರು ನವದೆಹಲಿಯ ರೋಹಿಣಿ ಸೆಕ್ಟರ್-7 ನಲ್ಲಿ ಕಾರ್ಯಾಚರಿಸುತ್ತಿದ್ದ ನಕಲಿ ಕಾಲ್ ಸೆಂಟರನ್ನು ಪತ್ತೆ ಹಚ್ಚಿದೆ.
ಮುಖ್ಯ ಆರೋಪಿಗಳಾದ ದೆಹಲಿಯ ಸುಲ್ತಾನಪುರಿಯ ನಿವಾಸಿಗಳಾದ ರಾಮ್‌ಕುಮಾರ್ (34), ಶ್ಯಾಮ್ ಕುಮಾರ್ (35) ಮತ್ತು ಗೋವಿಂದ್ (22) ಒಟ್ಟಾಗಿ ಈ ಕಾಲ್ ಸೆಂಟರನ್ನು ನಡೆಸುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಶುಕ್ರವಾರ ನಡೆಸಿದ ದಾಳಿಯಲ್ಲಿ ವಂಚನೆಯ ದಂಧೆ ಹೊರಬಂದಿದ್ದು, ಆರೋಪಿಗಳು ಹೆಚ್ಚಾಗಿ ಈಶಾನ್ಯ ರಾಜ್ಯಗಳಿಗೆ ಸೇರಿದ ಜನರನ್ನು ವಂಚಿಸುತ್ತಿದ್ದರು ಎಂದು ಡಿಸಿಪಿ ಪ್ರಣವ್ ತಯಾಲ್ ಹೇಳಿದ್ದಾರೆ.
ಇಂಟರ್ನೆಟ್ ಮೂಲಕ ಬೇರೆ ಬೇರೆ ರಾಜ್ಯಗಳ ಜನರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ, ಅವರಿಗೆ ಕರೆ ಮಾಡುತ್ತಿದ್ದರು. ಈ ಮೂಲಕ 'ತಮ್ಮ ದೂರವಾಣಿ ಸಂಖ್ಯೆ ಲಾಟರಿಯಲ್ಲಿ ಆಯ್ಕೆಯಾಗಿದ್ದು, 17,000 ರೂ. ಮೌಲ್ಯದ ಮೊಬೈಲ್ ಫೋನ್ 4,500 ರೂ.ಗಳಿಗೆ ಸಿಗುತ್ತದೆ' ಎಂದು ನಂಬಿಸಿ ಹಣ ಪೀಕುತ್ತಿದ್ದರು ಎನ್ನಲಾಗಿದೆ. ತಮ್ಮ ‘ಅದೃಷ್ಟವಂತ’ ಗ್ರಾಹಕರನ್ನು ನಂಬಿಸಲು ಪೋಸ್ಟ್ ಆಫೀಸಿನ ಮೂಲಕ ಮೊಬೈಲ್ ಕಳುಹಿಸುವುದಾಗಿ ಹೇಳುತ್ತಿದ್ದರು. ನಂತರ ಮೊಬೈಲ್ನ ಬದಲಿಗೆ, ಅಗ್ಗದ ಪರ್ಸ್ಗಳು, ಬೆಲ್ಟ್, ಸೋಪು ಮುಂತಾದವನ್ನು ಪಾರ್ಸಲ್ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರಿಂದ 3 ಕಂಪ್ಯೂಟರ್, 52 ಮೊಬೈಲ್ ಮತ್ತು 384 ವಿವಿಧ ವಸ್ತುಗಳ ಪ್ಯಾಕೆಟುಗಳನ್ನು ಪೊಲೀಸರು ವಶಡಿಸಿಕೊಂಡಿದ್ದಾರೆ.